ಬೆಂಗಳೂರು:ದೇವೇಗೌಡರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ. ಇಷ್ಟು ದಿನ ಕುಮಾರಸ್ವಾಮಿ ಬಗ್ಗೆ ಮಾತಾಡ್ತಾ ಇದ್ದೆ. ಇನ್ಮುಂದೆ ಕುಮಾರಸ್ವಾಮಿ ಬಗ್ಗೆಯೂ ಏನೂ ಮಾತನಾಡಲ್ಲ ಎಂದು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಮಂಡ್ಯ ಹಾಲು ಒಕ್ಕೂಟ ಸ್ಥಳೀಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯ ಅನರ್ಹತೆಗೆ ನಾನು ಕಾರಣ ಎಂದು ದೇವೇಗೌಡರು ಆರೋಪಿಸಿದ್ದಾರೆ. ಅವರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ. ಆದರೆ ನಮಗೆ ಕಲಿಸಿಕೊಟ್ಟಿದ್ದೇ ಕುಮಾರಸ್ವಾಮಿ, ರೇವಣ್ಣ. ಇದೇ ನಮ್ಮ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್ನ ಹತ್ತು ಜನರನ್ನು ಅಮಾನತುಗೊಳಿಸಿ ಚುನಾವಣೆಗೆ ನಿಲ್ಲದಂತೆ ಮಾಡಿದ್ದರು. ಸಹಕಾರ ಸಂಸ್ಥೆಗಳಲ್ಲಿ ಅವರಿಗೊಂದು ಕಾನೂನು ನಮಗೊಂದು ಕಾನೂನು ಅಂತ ಬೇರೆ ಇರಲ್ಲ. ಅವರಿಗೆ ಇರುವ ಕಾನೂನು ನಮಗೂ ಇರುತ್ತದೆ ಎಂದರು.
ನಮ್ಮ ಮಾಗಡಿ ಬಾಲಕೃಷ್ಣ ಕ್ಷೇತ್ರದಲ್ಲೂ ಈ ರೀತಿ ಆಯ್ತು. ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ 8 ಮಂದಿ ಅಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರನ್ನು ರಾತ್ರೋರಾತ್ರಿ ಅಮಾನತುಗೊಳಿಸಲಾಯಿತು. ಮೂರ್ತಿ ಎಂಬುವರು ಒಂದು ಅವಕಾಶ ಕಳೆದುಕೊಂಡಿದ್ದರು. ಎಲ್ಲವನ್ನೂ ನಮ್ಮ ನಾಯಕರೇ ನಮಗೆ ಕಲಿಸಿಕೊಟ್ಟಿದ್ದಾರೆ. ಇವರ ಸಹೋದರ ಒಕ್ಕೂಟದಲ್ಲಿ ಕಾರ್ಯದರ್ಶಿಯಾಗಿರುವ ಹಿನ್ನೆಲೆ ಕುಟುಂಬದ ಮತ್ತೊಬ್ಬ ಸದಸ್ಯ ಸ್ಪರ್ಧೆ ಮಾಡಬಾರದು ಎನ್ನುವ ಕಾರಣ ನೀಡಿ ಅಮಾನತುಗೊಳಿಸಲಾಗಿದೆ. ಇಲ್ಲಿ ನನ್ನ ಕೈವಾಡವೇನು ಇಲ್ಲ ಎಂದರು.