ಬೆಂಗಳೂರು:ಶೀಲ ಶಂಕಿಸಿ ಚಾಕುವಿನಿಂದ ಹೆಂಡತಿಯ ಕತ್ತು ಸೀಳಿ ಗಂಡನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
34 ವರ್ಷದ ರೂಪಾ ಕೊಲೆಯಾಗಿದ್ದು, ಗಂಡ ಕಾಂತರಾಜ್ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಕೊಂಡು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
9 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಮುದ್ದಾದ ಮಗನಿದ್ದಾನೆ. ಪ್ರತಿನಿತ್ಯ ಪತ್ನಿಯ ಶೀಲ ಶಂಕಿಸಿ ಪತಿ ಕಾಂತರಾಜ್ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಮನಃಸ್ತಾಪ ಉಂಟಾಗುತ್ತಿತ್ತು.
ಬುಧವಾರ ಸಂಜೆ 4.30ರಲ್ಲಿ ಕಾಂತರಾಜ್ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಆಕೆ ಬೇರೆ ವ್ಯಕ್ತಿಯೊಂದಿಗೆ ಮಾತನಾಡಿರುವುದು ಕಂಡು ಬಂದಿತ್ತು. ಈ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿತ್ತು.
ಆಕ್ರೋಶಗೊಂಡ ಕಾಂತರಾಜ್ ಅಡುಗೆ ಮನೆಯಲ್ಲಿದ್ದ ಚೂರಿಯಿಂದ ಪತ್ನಿ ರೂಪಾ ಕತ್ತಿಗೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಟ್ಯೂಷನ್‌ಗೆ ಹೋಗಿದ್ದ ಮಗ ಮನೆಗೆ ವಾಪಸ್ಸಾದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನ್ನಪೂಣೇಶ್ವರಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಕಾಂತರಾಜ್‌ಗೆ ಶೋಧ ಮುಂದುವರೆದಿದೆ.
ಇದನ್ನೂ ಓದಿ:ಸಾಫ್ಟ್‌ವೇರ್ ಗಂಡನೊಂದಿಗೆ ವಿರಸ: ಮದುವೆಯಾದ ಮೂರೇ ತಿಂಗಳಿಗೆ ಬದುಕು ಮುಗಿಸಿದ ಮಹಿಳೆ