ಬೆಂಗಳೂರು: ಲಾಕ್‌ಡೌನ್ ಮಧ್ಯೆ ಆರ್ಥಿಕ ಚಟುವಟಿಕೆ ಪ್ರಾರಂಭಿಸಲಾಗಿದೆ. ಇದರ ಜೊತೆಗೆ ಕೊರೊನಾ ನಿಯಂತ್ರಣ ಮಾಡುವ ಅಗತ್ಯವೂ ಇದೆ. ಇದರ ಯಶಸ್ಸು ಜನರ ಕೈಯ್ಯಲ್ಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ತಮ್ಮ ಕ್ವಾರಂಟೈನ್ ಅವಧಿ ಮುಗಿಸಿ ಸಚಿವ ಡಾ.ಕೆ.ಸುಧಾಕರ್, ಸಿ.ಟಿ.ರವಿ ಜತೆಗೂಡಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಒಂದು ವೇಳೆ ಲಾಕ್‌ಡೌನ್ ನಿರೀಕ್ಷಿತ ಯಶಸ್ಸು ಕಂಡಿಲ್ಲವಾದರೆ, ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ. ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿದ್ದೇವೆ. ಆದರೆ ಕೊರೊನಾ ಸೋಂಕಿತ ಖಾಸಗಿ ಪತ್ರಕರ್ತರ ಜೊತೆ ಪ್ರೈಮರಿ ಕಾಂಟಾಕ್ಟ್ನಲ್ಲಿದ್ದ ಕಾರಣ ನಾವೆಲ್ಲ ಟೆಸ್ಟ್ ಮಾಡಿಸಿದ್ದೆವು. ಆಗ ನೆಗೆಟಿವ್ ರಿಪೋರ್ಟ್ ಬಂತು.
ಆದರೂ ಮುಂಜಾಗ್ರತಾ ಕ್ರಮವಾಗಿ ಸ್ವಯಂ ಕ್ವಾರೆಂಟೈನ್ನಲ್ಲಿ ಇದ್ದೆವು. ಈಗ ನಾವು ಕ್ವಾರೆಂಟೈನ್ನಿಂದ ಮುಕ್ತರಾಗಿದ್ದೇವೆ. ಕ್ವಾರೆಂಟೈನ್ನಲ್ಲಿ ಇದ್ದೇ ನಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಕೆಲಸ ಕಾರ್ಯ ಮಾಡಿದ್ದೇವೆ. ಕೊರೊನಾ ವೈರಸ್ ಬೆಳವಣಿಗೆ ಕೂಡ ಗಮನಿಸಿ, ಡಿಸಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೆವು. ಇನ್ನಷ್ಟು ಗಟ್ಟಿ ಸಂಕಲ್ಪದಿಂದ ಕೊರೊನಾ ವಿರುದ್ಧ ಹೋರಾಟ ಮಾಡುತ್ತೇವೆ. ರಾಜ್ಯದ ಜನರು ಕ್ವಾರೆಂಟೈನ್ನಲ್ಲಿರುವ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ ಎಂದರು.
ಹೊರ ರಾಜ್ಯದಿಂದ ಬರುವವರ ಬಗ್ಗೆ ಆತಂಕ ಇದೆ:ಹೊರ ರಾಜ್ಯಗಳಿಂದ ಬರುವವರಿಂದ ಸೋಂಕು ಹೆಚ್ಚಾಗುವ ಆತಂಕ ಇದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನಧಿಕೃತವಾಗಿ ಹಲವರು ವಲಸೆ ಬರುತ್ತಾ ಇದ್ದಾರೆ. ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಿಂದ ಬರುವವರ ಮೇಲೆ ತೀವ್ರ ನಿಗಾ ಇಡಲು ಸೂಚನೆ ನೀಡಲಾಗಿದೆ. ನಿಪ್ಪಾಣಿ ಗಡಿಯಲ್ಲಿ ವಲಸೆ ಬರುವವರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ. ಪ್ರತಿ ಜಿಲ್ಲೆಗಳ ಡಿಸಿ, ಎಸ್ಪಿಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು.
ಇನ್ನು,ನಕಲಿ ಪಾಸ್ ನೀಡಿ ಬಂದ ಕೆಲವರನ್ನು ವಾಪಸ್ ಕಳುಹಿಸಲಾಗಿದೆ. ಕೆಲವರು ಅನಧಿಕೃತವಾಗಿ ಬರುವವರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಆ್ಯಂಬುಲೆನ್ಸ್, ಗೂಡ್ಸ್ ಲಾರಿ ಮೂಲಕ ಬರುವವರ ಮೇಲೆ ನಿಗಾ ಇಡಲಾಗುತ್ತಿದೆ. ಎಲ್ಲ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ನಿರ್ದೇಶನ ನೀಡಿದ್ದೇನೆ ಎಂದರು.