ಬೆಂಗಳೂರು :ರಾಜ್ಯದಲ್ಲಿ ಹಿಜಾಬ್ ವಿವಾದಕ್ಕೆ ಸರ್ಕಾರ 'ಸಮವಸ್ತ್ರ ಸಂಹಿತೆ ಕಡ್ಡಾಯ' ಸುತ್ತೋಲೆ ತಂದು ಬ್ರೇಕ್ ಹಾಕಿದ್ರು ಸಹ ಅದರ ಕಿಡಿ ಇನ್ನೂ ನಿಂತಿಲ್ಲ. ಶಿಕ್ಷಣ ಇಲಾಖೆಯ ವಸ್ತ್ರಸಂಹಿತೆಯ ಆದೇಶದ ವಿರುದ್ಧ ವಿರೋಧಗಳ ಸರಮಾಲೆ ಶುರುವಾಗಿದೆ. ಶಿಕ್ಷಣ ಇಲಾಖೆಯ ಸುತ್ತೋಲೆಗೆ ಕ್ಯಾಂಪಸ್ ಫ್ರಂಟ್ ಹಾಗೂ ನ್ಯಾಷನಲ್ ವುಮನ್ಸ್ ಫ್ರಂಟ್ನಿಂದ ವಿರೋಧ ವ್ಯಕ್ತವಾಗಿದೆ.
ಸಮವಸ್ತ್ರ ವಿಚಾರ ವಿದ್ಯಾರ್ಥಿಗಳ ರಿಟ್ ಅರ್ಜಿ ವಿಚಾರಣಾ ಹಂತದಲ್ಲಿದೆ. ನ್ಯಾಯಾಲಯದ ವಿಚಾರಣಾ ಹಂತದಲ್ಲಿಯೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಸಕಾಂಗದ ಅಧಿಕಾರ ದುರ್ಬಳಕೆ ಮಾಡಿಕೊಂಡು ಸುತ್ತೋಲೆ ಹೊರಡಿಸಿದೆ. ನ್ಯಾಯಾಂಗದ ಹಿತಾಸಕ್ತಿ ಮೇಲೆ ಫ್ರಭಾವ ಬೀರಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರದ ಸಮವಸ್ತ್ರ ಆದೇಶ ವಿರೋಧಿಸಿ ಇಂದು ನ್ಯಾಷನಲ್ ವುಮನ್ಸ್ ಫ್ರಂಟ್ನಿಂದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ, ಫರ್ಜಾನಾ ಮಹಮ್ಮದ್, ಯಾವುದೇ ತೀರ್ಪು ಬಂದರೂ ನಾವು ಹಿಜಾಬ್ ಕಳಚವುದಿಲ್ಲ.
ನಮ್ಮ ಸಂವಿಧಾನ ಕೊಟ್ಟ ಹಕ್ಕನ್ನು ಕೈ ಬಿಡುವುದಿಲ್ಲ. ನ್ಯಾಯಾಂಗ ನಮ್ಮ ಹಕ್ಕನ್ನು ಎತ್ತಿ ಹಿಡಿಯುತ್ತದೆ ಎಂಬ ಭರವಸೆ ಇದೆ. ಮತ್ತೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.