ಬೆಂಗಳೂರು: ರಾಜ್ಯಕ್ಕೆ ಕೋವಿಡ್ ಕಾಲಿಟ್ಟ ನಂತರ ಮೊದಲು ಚಿಕಿತ್ಸೆ ನೀಡಲು ಆರಂಭಿಸಿದ್ದೇ ಸರ್ಕಾರಿ ಆಸ್ಪತ್ರೆಗಳಲ್ಲಿ. ಮಾಸಿದ ಕಟ್ಟಡ, ಹಳೆಯ ವೈದ್ಯಕೀಯ ಉಪಕರಣ, ಕೇವಲ ಬಡ - ಮಧ್ಯಮ ವರ್ಗದವರಷ್ಟೇ ಬರುತ್ತಿದ್ದ ಜಿಲ್ಲಾಸ್ಪತ್ರೆಗಳ ಚಿತ್ರಣ ಕೋವಿಡ್ - 19ರಿಂದ ಸಂಪೂರ್ಣ ಬದಲಾಗಿದೆ. ಅತ್ಯಾಧುನಿಕ ಉಪಕರಣ, ಸುಸಜ್ಜಿತ ವೈದ್ಯಕೀಯ ಪರಿಕರಗಳ ಹೆಚ್ಚುವರಿ ಲಭ್ಯತೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಹೈಟೆಕ್ ಟೆಚ್ ಸಿಕ್ಕಿದೆ.
ರಾಜ್ಯದ ಬಹುತೇಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ಸಾಮಾನ್ಯವಾಗಿತ್ತು. ನೈರ್ಮಲ್ಯ ಮರೀಚಿಕೆಯಾಗಿತ್ತು. ಆದರೆ, ಕೊರೊನಾ ಕಾರಣದಿಂದ ಸರ್ಕಾರಿ ಆಸ್ಪತ್ರೆಗಳು ಬದಲಾಗಿವೆ. ಎಲ್ಲ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗಿದ್ದು, ಸಾಮಾನ್ಯ ಬೆಡ್ಗಳ ಜೊತೆ ಐಸಿಯು ಬೆಡ್, ವೆಂಟಿಲೇಟರ್ ಬೆಡ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಹೊಸ ಬೆಡ್, ಬ್ಲಾಂಕೆಟ್ ವ್ಯವಸ್ಥೆ ಮಾಡಿದ್ದು, ಕೋವಿಡ್ಗಾಗಿಯೇ ಹೆಚ್ಚುವರಿಯಾಗಿ ₹323.60 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿ ಮಾಡಲಾಗಿದೆ. ₹10.61 ಕೋಟಿ ಮೌಲ್ಯದ ವೆಂಟಿಲೇಟರ್ ಖರೀದಿಸಲಾಗಿದ್ದು, 1,000 ವೆಂಟಿಲೇಟರ್ಗಳು ಹೊಸದಾಗಿ ಸರ್ಕಾರಿ ಆಸ್ಪತ್ರೆ ಸೇರಿವೆ. ಸರ್ಜಿಕಲ್ ಮಾಸ್ಕ್, ಸಾಮಾನ್ಯ ಮಾಸ್ಕ್, ಸ್ಯಾನಿಟೈಸರ್ ಕೂಡ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಲಭ್ಯವಿದೆ.
ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾದ ಹಿನ್ನೆಲೆಯಲ್ಲಿ ಆಸ್ಪತ್ರೆಗಳನ್ನು ದುರಸ್ತಿಗೊಳಿಸಿದ್ದು, ಸಂಪೂರ್ಣ ನೈರ್ಮಲ್ಯಯುಕ್ತವಾಗಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ರೀತಿ ಸರ್ಕಾರಿ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗಿದೆ. ವೈದ್ಯಕೀಯ ಉಪಕರಣ, ಪರಿಕರಗಳ ಕೊರತೆ ನೀಗಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗಿಂತಲೂ ವಿಶ್ವಾಸಾರ್ಹತೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬದಲಾದ ಸರ್ಕಾರಿ ಆಸ್ಪತ್ರೆಗಳ ಚಿತ್ರಣ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಸದ್ಯದ ಮಟ್ಟಿಗೆ ಬೆಡ್ಗಳ ಕೊರತೆ ಇಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶೇ.30-40ರಷ್ಟು ಬೆಡ್ಗಳು ಖಾಲಿ ಇವೆ. ಆದರೆ, ಐಸಿಯು ಬೆಡ್, ಆಕ್ಸಿಜನ್ ಸಮಸ್ಯೆ ಇತ್ತೀಚೆಗೆ ಕಂಡುಬರುತ್ತಿದೆ ಎನ್ನುವುದನ್ನು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಆದರೆ, ಆಕ್ಸಿಜನ್ ಕೊರತೆ, ಐಸಿಯು ಬೆಡ್ಗಳ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆಕ್ಸಿಜನ್ ಸಮಸ್ಯೆ ಕಂಡು ಬಂದರೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೂ ಸೂಚಿಸಿದ್ದಾರೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್ ಸಂಖ್ಯೆ
- ಸರ್ಕಾರಿ ಆಸ್ಪತ್ರೆ - 11,295 (ಬೆಡ್)
- ಕೋವಿಡ್ ಆಸ್ಪತ್ರೆ - 5,053
- ಆಕ್ಸಿಜನ್ ಬೆಡ್ ಸಂಖ್ಯೆ - 6,580
- ಐಸಿಯು ಬೆಡ್ ಸಂಖ್ಯೆ - 1,985
- ವೆಂಟಿಲೇಟರ್ ಬೆಡ್ - 979
ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ಬೆಡ್ ವಿವರ
ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ 1,037 ಕೋವಿಡ್ ಬೆಡ್ ಇದ್ದು, ಸದ್ಯ 577 ಬೆಡ್ಗಳು ಭರ್ತಿಯಾಗಿವೆ. 460 ಬೆಡ್ ಖಾಲಿ ಇವೆ. ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 839 ಕೋವಿಡ್ ಬೆಡ್ ಇದ್ದು, ಅದರಲ್ಲಿ 633 ಬೆಡ್ ಭರ್ತಿಯಾಗಿವೆ. 206 ಬೆಡ್ ಖಾಲಿ ಇವೆ. 96 ಐಸಿಯು ಬೆಡ್, 144 ವೆಂಟಿಲೇಷನ್ ಐಸಿಯು ಬೆಡ್ ಲಭ್ಯವಿದೆ. ಒಟ್ಟು ಬೆಂಗಳೂರಿನಲ್ಲಿ 1876 ಸರ್ಕಾರಿ ಬೆಡ್ ಇದ್ದು, 1210 ಬೆಡ್ ಭರ್ತಿಯಾಗಿವೆ, 666 ಬೆಡ್ಗಳು ಖಾಲಿ ಇವೆ.
ಜೊತೆಗೆ ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶೇ.50ರಷ್ಟು ಬೆಡ್ಗಳು ಸರ್ಕಾರಿ ಕೋಟಾದಡಿ ಲಭ್ಯವಿದೆ. ಅದರಲ್ಲಿಯೂ ಶೇ.35ರಷ್ಟು ಬೆಡ್ಗಳು ಖಾಲಿ ಇದ್ದು, ಸೋಂಕಿತರಿಗೆ ಬೆಡ್ ಲಭ್ಯತೆ ಬಗ್ಗೆ ಯಾವುದೇ ಆತಂಕ ಬೇಡ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.