ಬೆಂಗಳೂರು :ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಸಂತ್ರಸ್ತೆಯ ಗರ್ಭಪಾತಕ್ಕೆ ಸಮ್ಮತಿ ನೀಡಿರುವ ಹೈಕೋರ್ಟ್, ಸಂತಾನೋತ್ಪತ್ತಿ ಆಯ್ಕೆ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯದ ಭಾಗವಾಗಿದೆ. ಇದನ್ನು ಸಂವಿಧಾನದ ವಿಧಿ 21ರ ಅಡಿ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಅತ್ಯಾಚಾರದ ಪರಿಣಾಮವಾಗಿ ಗರ್ಭ ಧರಿಸಿದ್ದ 16 ವರ್ಷದ ಅಪ್ರಾಪ್ತೆ ಗರ್ಭಪಾತಕ್ಕೆ ಅನುಮತಿಸದ ವೈದ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ವೈದ್ಯಕೀಯ ಗರ್ಭಪಾತ ಕಾಯಿದೆ 1971ರ ಸೆಕ್ಷನ್ 3ರ ಅಡಿ ಗರ್ಭ ಧರಿಸಿ 24 ವಾರಗಳು ಪೂರ್ಣಗೊಂಡಿದ್ದರೆ ಗರ್ಭಪಾತ ಮಾಡಲಾಗದು ಎಂದು ವೈದ್ಯಕೀಯ ಅಧಿಕಾರಿ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಒಲ್ಲದ ಭ್ರೂಣವನ್ನು ತೆಗೆಸಲು ಅನುಮತಿ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು.
ಅತ್ಯಾಚಾರಕ್ಕೊಳಗಾದ ಮತ್ತು ಅದರ ಕಾರಣದಿಂದಾಗಿ ಗರ್ಭಿಣಿಯಾಗಿರುವ ಅಪ್ರಾಪ್ತೆ ಸಾಕಷ್ಟು ನೊಂದಿರುತ್ತಾಳೆ. ಇಂತಹ ಸಂದರ್ಭದಲ್ಲಿ ಗರ್ಭಪಾತಕ್ಕೆ ಸಮ್ಮತಿಸದಿದ್ದರೆ ಅಪರಾಧದ ಹೊರೆಯನ್ನು ಆಕೆಯೇ ಹೊರಲು ಬಲವಂತ ಮಾಡಿದಂತಾಗುತ್ತದೆ. ಆಕೆಯ ಪರಿಕಲ್ಪನೆಯ ಸಂತಾನೋತ್ಪತ್ತಿ ಆಯ್ಕೆಗೆ ವಿರುದ್ದವಾಗಿ ಮಗುವಿಗೆ ಜನ್ಮ ನೀಡುವಂತೆ ಒತ್ತಾಯಿಸಲಾಗದು ಎಂದಿದೆ.