ಕರ್ನಾಟಕ

karnataka

ETV Bharat / city

ಅನಧಿಕೃತ ಧ್ವಜಸ್ತಂಭ, ಪ್ರತಿಮೆಗಳ ತೆರವು ಕೋರಿ ಅರ್ಜಿ: ಕ್ರಮ ಕೈಗೊಳ್ಳಲು ಪಾಲಿಕೆಗೆ ಹೈಕೋರ್ಟ್ ಆದೇಶ

ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸ್ಥಾಪಿಸಲಾಗಿರುವ ಅನಧಿಕೃತ ಧ್ವಜಸ್ತಂಭ ಮತ್ತು ಪ್ರತಿಮೆಗಳನ್ನು ತೆರವಿನ ಕುರಿತು ದೂರು ಸಲ್ಲಿಕೆಯಾದರೆ, ಆ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಪಾಲಿಕೆಗೆ ನಿರ್ದೇಶಿಸಿದೆ.

High Court
High Court

By

Published : Oct 30, 2021, 6:39 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಅನಧಿಕೃತ ಧ್ವಜಸ್ತಂಭ ಹಾಗೂ ಪ್ರತಿಮೆಗಳ ತೆರವಿಗೆ ದೂರು ಸಲ್ಲಿಕೆಯಾದರೆ, ಆ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಪಾಲಿಕೆಗೆ ನಿರ್ದೇಶಿಸಿದೆ.

ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಸ್ಥಾಪಿಸಲಾಗಿರುವ ಅನಧಿಕೃತ ಧ್ವಜಸ್ತಂಭ ಮತ್ತು ಪ್ರತಿಮೆಗಳನ್ನು ತೆರವು ಮಾಡಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ನಗರದ ಕಾಟನ್ ಪೇಟೆ ನಿವಾಸಿ ಕೆ.ಎಸ್. ಸುರೇಶ್ ಎಂಬುವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಮೇಲಿನ ಅನಧಿಕೃತ ಪ್ರತಿಮೆ ಮತ್ತು ಧ್ವಜಸ್ತಂಭಗಳಿಂದ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಅವುಗಳನ್ನು ತೆರವುಗೊಳಿಸಲು ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿದರು.

ಬಿಬಿಎಂಪಿ ಪರ ವಕೀಲರು ವಾದಿಸಿ, ನಿರ್ದಿಷ್ಟವಾಗಿ ಯಾವ ಪ್ರತಿಮೆಯಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅರ್ಜಿದಾರರು ಹೇಳಿಲ್ಲ. ನಗರದಲ್ಲಿ ಕೆಲ ಪ್ರತಿಮೆಗಳು ಕಳೆದ 20 -25 ವರ್ಷಗಳಿಂದಿವೆ. ಅವುಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಯಾವ ಪ್ರತಿಮೆಯಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ನಿಖರವಾಗಿ ತಿಳಿಸಿದರೆ, ಆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಯಾವ ಪ್ರತಿಮೆಯಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಬಗ್ಗೆ 10 ದಿನಗಳಲ್ಲಿ ಅರ್ಜಿದಾರರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಬೇಕು. ಒಂದು ವೇಳೆ, ಅರ್ಜಿದಾರರು ದೂರು ಸಲ್ಲಿಸಿದರೆ, ಆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕ್ರಮ ಜರುಗಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ABOUT THE AUTHOR

...view details