ಬೆಂಗಳೂರು:ಮೈಸೂರಿನ ನಾರಾಯಣ ಶಾಸ್ತ್ರಿ–ಕೃಷ್ಣ ವಿಲಾಸ ರಸ್ತೆಯಲ್ಲಿರುವ ಪುರಾತನ ನಿರಂಜನ ಮಠ ಹಾಗು ಎನ್‌ಟಿಎಂ (NTM) ಶಾಲೆಗೆ ಸೇರಿದ ಸ್ಥಳದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕಾಗಿ 36 ಸಾವಿರ ಚದರ ಅಡಿ ಭೂಮಿಯನ್ನು ರಾಮಕೃಷ್ಣ ಆಶ್ರಮಕ್ಕೆ ನೀಡಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ (Karnataka High Court) ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಮೈಸೂರಿನ ಟಿ.ಎಸ್.ಲೋಕೇಶ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿ, ವಿಚಾರಣೆಯನ್ನ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜೆ.ಎಂ ಅನಿಲ್‌ಕುಮಾರ್ ವಾದ ಮಂಡಿಸಿ, 'ರಾಜ್ಯ ಸರ್ಕಾರ ಈ ಸ್ಥಳವನ್ನು ಒತ್ತಡಕ್ಕೆ ಮಣಿದು ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರಿಸಿದೆ. ವಿವೇಕಾನಂದರ ಸ್ಮಾರಕ ನಿರ್ಮಾಣಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ಇಲ್ಲಿನ ಪುರಾತನ ಈಶ್ವರ ದೇವಾಲಯ ಮತ್ತು ಮಠದ ಕುರುಹುಗಳನ್ನು ನಾಶ ಮಾಡಿ ಸ್ಮಾರಕ ನಿರ್ಮಿಸುವುದು ಸರಿಯಲ್ಲ. ಆದ್ದರಿಂದ ಈ ವಿವಾದಿತ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಬೇಕು ಮತ್ತು ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು' ಎಂದು ಕೋರಿದರು.
ಸ್ವಾಮಿ ವಿವೇಕಾನಂದರ 100ನೇ ಜನ್ಮದಿನದ ಸ್ಮರಣಾರ್ಥ ಅವರು ದೇಶದ ವಿವಿಧೆಡೆ ಸಂಚರಿಸಿ ತಂಗಿದ್ದ ಪ್ರಮುಖ ಸ್ಥಳಗಳನ್ನು ಸ್ಮಾರಕ ರೂಪದಲ್ಲಿ ಕಾಪಾಡುವ ಉದ್ದೇಶದ ಹಿನ್ನೆಲೆಯಲ್ಲಿ ಈ ಭೂಮಿಯನ್ನು ರಾಜ್ಯ ಸರ್ಕಾರ 2013ರ ಜನವರಿ 9ರಂದು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿದೆ.
ಇದನ್ನೂ ಓದಿ:ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಜನ ಕೇಂದ್ರ ಸ್ಥಾಪಿಸುವ ವಿಚಾರ: ವಿದ್ಯಾರ್ಥಿಗಳ ಮನವಿ ವಜಾಗೊಳಿಸಿದ ಹೈಕೋರ್ಟ್