ಕರ್ನಾಟಕ

karnataka

ETV Bharat / city

ಎಸ್​ಟಿ ಜಾತಿ ಪತ್ರದೊಂದಿಗೆ ಸರ್ಕಾರಿ ನೌಕರಿ ಪಡೆದಿದ್ದ ಬ್ರಾಹ್ಮಣ ಮಹಿಳೆ.. ಕ್ರಿಮಿನಲ್​ ಕೇಸ್​ ರದ್ದು ಮಾಡಿದ ಹೈಕೋರ್ಟ್​

ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಮಹಿಳೆ ಎಸ್​ಟಿ ಜಾತಿ ಪ್ರಮಾಣಪತ್ರ ಪಡೆದುಕೊಂಡು ಸರ್ಕಾರಿ ಉದ್ಯೋಗ ಪಡೆದಿದ್ದಕ್ಕೆ ದಾಖಲಾಗಿದ್ದ ಕ್ರಿಮಿನಲ್​ ಪ್ರಕರಣವನ್ನು ಹೈಕೋರ್ಟ್​ ರದ್ದು ಮಾಡಿದೆ.

high-court
ಹೈಕೋರ್ಟ್​ ಆದೇಶ

By

Published : May 11, 2022, 10:51 PM IST

ಬೆಂಗಳೂರು:ಹುಟ್ಟಿನಿಂದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದ ಆರೋಪದಡಿ ಮಹಿಳೆಯೊಬ್ಬರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.

ತಮ್ಮ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಕೇಸ್ ರದ್ದುಪಡಿಸಬೇಕು ಎಂದು ಕೋರಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ. ನಟರಾಜನ್ ಅವರಿದ್ದ ಪೀಠ ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.

ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರ ಮಹಿಳೆ ಮದುವೆಯಾದ ಆರಂಭದಲ್ಲಿಯೇ ಎಸ್​ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವರು ಉದ್ಯೋಗಕ್ಕಾಗಿ ಎಸ್‌ಟಿ ಜಾತಿ ಪ್ರಮಾಣಪತ್ರ ಪಡೆಯುವ ಕ್ರಿಮಿನಲ್ ಉದ್ದೇಶ ಹೊಂದಿರುವಂತೆ ಕಾಣುವುದಿಲ್ಲ. ಇನ್ನು, 1989ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಜಾರಿಯಾಗುವ ಹಲವು ವರ್ಷಗಳ ಮುನ್ನವೇ ಅರ್ಜಿದಾರರು ಜಾತಿ ಪ್ರಮಾಣಪತ್ರ ಪಡೆದು ಉದ್ಯೋಗಕ್ಕೆ ಸೇರಿದ್ದಾರೆ. ಆ ವೇಳೆ ಜಾರಿಯಿಲ್ಲದ ಕಾನೂನು ಬಳಸಿ ಅವರನ್ನು ಶಿಕ್ಷಿಸಲಾಗದು ಎಂದು ಅಭಿಪ್ರಾಯಪಟ್ಟು, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ಮೂಲತಃ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಅರ್ಜಿದಾರ ಮಹಿಳೆ 1974ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಜನಾಂಗದ ವ್ಯಕ್ತಿಯನ್ನು ವಿವಾಹವಾಗಿದ್ದರು. ನಂತರ ಎಸ್ಟಿ ಜಾತಿ ಪ್ರಮಾಣಪತ್ರ ಪಡೆದು, ಇದೇ ಮೀಸಲು ಕೋಟಾದಡಿ ಎಸ್‌ಡಿಎ ಆಗಿ ಸರ್ಕಾರಿ ಸೇವೆಗೆ ಸೇರಿಕೊಂಡಿದ್ದರು. ಜಾತಿ ಪ್ರಮಾಣ ಪತ್ರ ಪರಿಶೀಲನೆ ವೇಳೆ ಮಹಿಳೆ ಮೂಲತಃ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಎಸ್ಟಿ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿತ್ತು.

2012ರಲ್ಲಿ ಪತಿಯ ಜಾತಿಯನ್ನು ಪತ್ನಿಗೆ ಅನ್ವಯಿಸಲಾಗದು ಹಾಗೂ ಎಸ್ಟಿ ಪ್ರಮಾಣ ಪತ್ರ ನೀಡಲಾಗದು ಎಂದು ತಿಳಿಸಿ ಮಹಿಳೆಯನ್ನು ನೌಕರಿಯಿಂದ ವಜಾಗೊಳಿಸಿ ಸರ್ಕಾರ ಆದೇಶಿಸಿತ್ತು. ನಂತರ, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಮತ್ತು ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಆರೋಪದಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ತುಮಕೂರಿನ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು, ತಮ್ಮ ವಿರುದ್ಧದ ಕೇಸ್ ರದ್ದು ಕೋರಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಓದಿ:ಲ್ಯಾಪ್‍ಟಾಪ್‍ನಲ್ಲಿ ದೋಷ: ವಿದ್ಯಾರ್ಥಿಗೆ ಪರಿಹಾರ ನೀಡುವಂತೆ ಲೆನೆವೊ ಕಂಪನಿಗೆ ಗ್ರಾಹಕರ ಕೋರ್ಟ್​ ಆದೇಶ

For All Latest Updates

TAGGED:

ABOUT THE AUTHOR

...view details