ಬೆಂಗಳೂರು: ರಾಮನಗರದ ಬಿಡದಿಯಲ್ಲಿ ಈಗಲ್‌ಟನ್ ಗಾಲ್ಫ್ ರೆಸಾರ್ಟ್ ನಿರ್ಮಾಣಕ್ಕೆ ಒತ್ತುವರಿ ಮಾಡಿಕೊಂಡಿದ್ದ 77.19 ಎಕರೆ ಸರ್ಕಾರಿ ಭೂಮಿಗೆ ಸರ್ಕಾರದ ನಿರ್ದೇಶನದಂತೆ ಹಣ ಪಾವತಿಸಲು ವಿಳಂಬ ಮಾಡಿದ್ದಲ್ಲದೇ, ಸರ್ಕಾರದ ನೋಟಿಸ್ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಕಂಪನಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ಸರ್ಕಾರದ ನೋಟಿಸ್ ಪ್ರಶ್ನಿಸಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಕಂಪನಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಿ. ನರೇಂದರ್ ಅವರಿದ್ದ ಏಕ ಸದಸ್ಯ ಪೀಠ ಸಂಸ್ಥೆಯ ಅರ್ಜಿ ವಜಾ ಮಾಡಿ ಆದೇಶಿಸಿದೆ.
ಅರ್ಜಿದಾರ ಸಂಸ್ಥೆಯು, ರಾಜ್ಯ ಸಚಿವ ಸಂಪುಟ ಹೆಚ್ಚಿನ ದರ ನಿಗದಿಪಡಿಸಿದೆ ಎಂದು ಆರೋಪಿಸಿದೆ. ಜೊತೆಗೆ ಭೂಮಿಯ ಮಾರುಕಟ್ಟೆ ದರ 12.35 ಕೋಟಿ ರೂಪಾಯಿ ಇದ್ದು, ಅದನ್ನೇ ಒಪ್ಪುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದೆ.
ಆದರೆ, ಅರ್ಜಿದಾರ ಸಂಸ್ಥೆ ಹಲವು ವರ್ಷಗಳಿಂದ ಸರ್ಕಾರದ ಜಮೀನನ್ನು ಅಕ್ರಮವಾಗಿ ಸ್ವಾಧೀನದಲ್ಲಿ ಇಟ್ಟುಕೊಂಡಿರುವುದರಿಂದ ದಂಡ ಪಾವತಿಸಬೇಕು. ಜೊತೆಗೆ, ದಶಕಗಳ ಕಾಲ ಭೂ ವ್ಯಾಜ್ಯ ಮುಂದುವರೆಸಿಕೊಂಡು ಬಂದಿರುವುದು ಕೂಡ ಸರಿಯಾದ ನಡವಳಿಕೆಯಲ್ಲ.
ವಾಣಿಜ್ಯ ಸಂಸ್ಥೆಗಳು ತಮ್ಮ ಕರ್ತವ್ಯ ತಿಳಿದುಕೊಂಡಿರಬೇಕು. ಆದರೆ, ಸಂಸ್ಥೆ ತನ್ನ ಅಕ್ರಮ ಮುಚ್ಚಿಕೊಳ್ಳಲು ವ್ಯಾಜ್ಯ ಮುಂದುವರೆಸಿಕೊಂಡು ಬಂದಿದೆ. ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಪೀಠ ಅಭಿಪ್ರಾಯಪಟ್ಟು ಸಂಸ್ಥೆಯ ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ಏನಿದು ಪ್ರಕರಣ?:1996ರಲ್ಲಿ ಈಗಲ್‌ಟನ್ ಗಾಲ್ಫ್ ರೆಸಾರ್ಟ್ ನಿರ್ಮಿಸಲು ಚಾಮುಂಡೇಶ್ವರಿ ಬಿಲ್ಡ್ ಟೆಕ್ ಕಂಪನಿ ರಾಮನಗರದಲ್ಲಿ 400 ಎಕರೆ ಭೂಮಿ ಖರೀದಿಸಿತ್ತು. ಜತೆಗೆ ಜಮೀನಿನ ಸುತ್ತ 77 ಎಕರೆ 19 ಗುಂಟೆ ಸರ್ಕಾರಿ ಭೂಮಿ ಒತ್ತುವರಿ ಮಾಡಿತ್ತು. ಈ ಭೂಮಿಗೆ ಒಟ್ಟು 982 ಕೋಟಿ ರೂ. ಪಾವತಿಸುವಂತೆ ಸರ್ಕಾರ 2016ರಲ್ಲಿ ಸಂಸ್ಥೆಗೆ ಸೂಚಿಸಿತ್ತು.
ಹಣ ಪಾವತಿಸದ ಹಿನ್ನೆಲೆ 2017ರ ಆಗಸ್ಟ್ 7ರಂದು ರಾಮನಗರ ಜಿಲ್ಲಾಧಿಕಾರಿ ಕಂಪನಿಗೆ ನೋಟಿಸ್ ನೀಡಿ, ಈ ಮೊದಲು ಪಾವತಿಸಿರುವ 12.35 ಕೋಟಿ ಬಿಟ್ಟು ಬಾಕಿ ಹಣ ಪಾವತಿಸುವಂತೆ ಸೂಚಿಸಿದ್ದರು. ಹಣ ಪಾವತಿಸದ ಸಂಸ್ಥೆ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.