ಬೆಂಗಳೂರು: ಸಿಗರೇಟ್ ವ್ಯಾಪಾರಿಗಳಿಂದ ಹಣ ಸುಲಿಗೆ ಮಾಡಿದ ಆರೋಪದಡಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಎಸಿಪಿ ಪ್ರಭುಶಂಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ( ಎಸಿಬಿ) ದಾಖಲಿಸಿದ್ದ ಎಫ್ಐಆರ್ಗಳಿಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಎಸಿಪಿ ಪ್ರಭುಶಂಕರ್ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್ಐಆರ್ಗೂ ಹೈಕೋರ್ಟ್ ತಡೆ
ಲಾಕ್ಡೌನ್ ಅವಧಿಯಲ್ಲಿ ಸಿಗರೇಟ್ ವ್ಯಾಪಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿ, ವ್ಯಾಪಾರಿಗಳಿಂದ ಲಂಚ ಪಡೆದ ಆರೋಪದಡಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಎಸಿಪಿ ಪ್ರಭುಶಂಕರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ( ಎಸಿಬಿ) ದಾಖಲಿಸಿದ್ದ ಎಫ್ಐಆರ್ಗಳಿಗೂ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಲಾಕ್ಡೌನ್ ಅವಧಿಯಲ್ಲಿ ಸಿಗರೇಟ್ ವ್ಯಾಪಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿ, ವ್ಯಾಪಾರಿಗಳಿಂದ ಲಂಚ ಪಡೆದ ಆರೋಪದಡಿ ಕೇಂದ್ರ ಅಪರಾಧ ವಿಭಾಗದ ಎಸಿಪಿ ಪ್ರಭುಶಂಕರ್ ವಿರುದ್ಧ ಕಾಟನ್ ಪೇಟೆ ಠಾಣೆ ಪೊಲೀಸರು 2 ಎಫ್ಐಆರ್ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು 3 ಪ್ರತ್ಯೇಕ ಎಫ್ಐಆರ್ ಗಳನ್ನ ದಾಖಲಿಸಿದ್ದರು. ಈ ಎಫ್ಐಆರ್ಗಳನ್ನ ರದ್ದುಪಡಿಸುವಂತೆ ಕೋರಿ ಎಸಿಪಿ ಪ್ರಭುಶಂಕರ್ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಕಳೆದ ಬುಧವಾರ ಕಾಟನ್ ಪೇಟೆ ಠಾಣೆ ಪೊಲೀಸರ ಎಫ್ಐಆರ್ಗಳಿಗೆ ತಡೆಯಾಜ್ಞೆ ನೀಡಿತ್ತು.
ಇದೀಗ ಎಸಿಬಿ ದಾಖಲಿಸಿದ್ದ ಮೂರು ಪ್ರತ್ಯೇಕ ಎಫ್ಐಆರ್ಗಳಿಗೂ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ಎಫ್ಐಆರ್ ದಾಖಲಿಸಬೇಕಾದರೆ ದೂರು ಸ್ವೀಕರಿಸಬೇಕಾಗುತ್ತದೆ. ಆದರೆ, ಅರ್ಜಿದಾರರ ವಿರುದ್ಧ ದೂರು ನೀಡದಿದ್ದರೂ ಎಸಿಬಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಕಾಟನ್ಪೇಟೆ ಠಾಣೆ ಪೊಲೀಸರು 2 ಎಫ್ಐಆರ್ ದಾಖಲಿಸಿದ್ದರು. ಒಂದೇ ಆರೋಪಕ್ಕೆ ಎರಡು ತನಿಖಾ ಸಂಸ್ಥೆಗಳು ಸೂಕ್ತ ಆಧಾರವೇ ಇಲ್ಲದೆ ಪ್ರತ್ಯೇಕವಾಗಿ ಎಫ್ಐಆರ್ಗಳನ್ನು ದಾಖಲಿಸಿರುವುದು ಮೇಲ್ನೋಟಕ್ಕೆ ಸಂಶಯಾಸ್ಪದವಾಗಿದೆ. ಹೀಗಾಗಿ ಎಫ್ಐಆರ್ಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದ್ದರು.