ಕರ್ನಾಟಕ

karnataka

ETV Bharat / city

ಹೈಕಮಾಂಡ್​ನಿಂದ ಅಚ್ಚರಿಯ ಸಿಎಂ ಅಭ್ಯರ್ಥಿಯಾಗಿ ಹೊರಹೊಮ್ಮಿದ ಬೊಮ್ಮಾಯಿ - ಕರ್ನಾಟಕ ಸಿಎಂ

ಮುಖ್ಯಮಂತ್ರಿ ಗಾದಿಗಾಗಿ ಹಿರಿಯ ಮುಖಂಡರಾದ ಮುರುಗೇಶ್​ ನಿರಾಣಿ, ಅರವಿಂದ ಬೆಲ್ಲದ್​, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರು ತೆರೆಮರೆಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಲಾಬಿ ನಡೆಸಿದ್ದರು. ಆದರೆ, ಹೈಕಮಾಂಡ್ ಬೊಮ್ಮಾಯಿ ಅವರನ್ನು ಸಿಎಂ ಆಗಿ ನೇಮಕ ಮಾಡುವ ಮೂಲಕ ಅಚ್ಚರಿ ನೀಡಿದೆ.

Karnataka new cm
ಹೈಕಮಾಂಡ್​ನಿಂದ ಅಚ್ಚರಿಯ ಸಿಎಂ ಅಭ್ಯರ್ಥಿಯಾಗಿ ಹೊರಹೊಮ್ಮಿದ ಬೊಮ್ಮಾಯಿ

By

Published : Jul 28, 2021, 6:52 AM IST

ಬೆಂಗಳೂರು: ಯಡಿಯೂರಪ್ಪ ಅವರ ರಾಜೀನಾಮೆ ಬಳಿಕ ಮುಖ್ಯಮಂತ್ರಿ ಹುದ್ದೆಗೆ ರಾಜ್ಯಕ್ಕೆ ಅಚ್ಚರಿಯ ಅಭ್ಯರ್ಥಿ ನೀಡುವುದಾಗಿ ಹೇಳುತ್ತಿದ್ದ ಬಿಜೆಪಿ ಹೈಕಮಾಂಡ್, ಹೆಚ್ಚಿನ ನಿರೀಕ್ಷೆ ಇಲ್ಲದ, ಮುಖ್ಯಮಂತ್ರಿ ಕುರ್ಚಿಗಾಗಿ ದೆಹಲಿ ಮಟ್ಟದಲ್ಲಿ ಪ್ರಬಲ ಲಾಬಿ ಮಾಡದ ಹಾಗೂ ಅಧಿಕಾರ ಕಳೆದುಕೊಂಡಿದ್ದ ಯಡಿಯೂರಪ್ಪ ಅವರ ಬಳಿಯೇ ಸುತ್ತುತ್ತಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡುವ ಮೂಲಕ ಅಚ್ಚರಿ ನೀಡಿದೆ.

ಮುಖ್ಯಮಂತ್ರಿ ಗಾದಿಗಾಗಿ ಹಿರಿಯ ಮುಖಂಡರಾದ ಮುರುಗೇಶ್​ ನಿರಾಣಿ, ಅರವಿಂದ ಬೆಲ್ಲದ್​, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಸಿಟಿ ರವಿ, ಆರ್.ಅಶೋಕ್​, ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಭಿನ್ನಮತೀಯ ನಾಯಕ ಬಸನಗೌಡ ಯತ್ನಾಳ್, ಮಾಜಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವರು ತೆರೆಮರೆಯಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಲಾಬಿ ನಡೆಸಿದ್ದರು.

ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಕೆಲವರಂತೂ ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡಿದ್ದರು. ತಮ್ಮ ಸಾಧನೆಗಳ ಬಗ್ಗೆ ವಿವರಿಸಲು ಆಕರ್ಷಕ ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡು ಪ್ರೋಮೊ ಸಿದ್ಧಪಡಿಸಿಕೊಂಡಿದ್ದರು. ಆದರೆ, ತಾನೊಂದು ಬಗೆದರೆ ದೈವವೊಂದು ಬಗೆದಿತ್ತು ಎನ್ನುವ ಗಾದೆ ಮಾತಿನಂತೆ ಹೈಕಮಾಂಡ್ ಆಯ್ಕೆಯೇ ಬೇರೆಯಾಗಿತ್ತು. ಹಲವಾರು ತಿಂಗಳಿನಿಂದ ದೆಹಲಿಗೆ ಭೇಟಿ ನೀಡಿ, ಹೈಕಮಾಂಡ್ ಬಳಿ ಲಾಬಿ ಮಾಡಿ ಮುಖ್ಯಮಂತ್ರಿ ಹುದ್ದೆಗೆ ತಾವೇ ಯಡಿಯೂರಪ್ಪ ಉತ್ತರಾಧಿಕಾರಿ ಎಂದು ಭಾವಿಸಿದ್ದ ಸಿಎಂ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್ ಅಚ್ಚರಿ ಎನ್ನುವಂತೆ ಬೊಮ್ಮಾಯಿ ಆಯ್ಕೆ ಮಾಡುವ ಮೂಲಕ ಸರ್ಪ್ರೈಸ್ ಆಗಿ ಶಾಕ್ ನೀಡಿದೆ.

ಮುಖ್ಯಮಂತ್ರಿ ಹುದ್ದೆಗೆ ಬೊಮ್ಮಾಯಿ ನೇಮಕ ಮಾಡಿದ ಹೈಕಮಾಂಡ್ ಆಯ್ಕೆಯನ್ನು ಯಡಿಯೂರಪ್ಪ ವಿರೋಧಿಗಳಿಗೆ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಯಡಿಯೂರಪ್ಪ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದ ಭಿನ್ನಮತೀಯ ನಾಯಕ ಬಸನಗೌಡ ಯತ್ನಾಳ್, ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಸರಸರನೇ ಸ್ಥಳದಿಂದ ತೆರಳಿರುವುದು ಬೊಮ್ಮಾಯಿ ಆಯ್ಕೆ ಮಾಡಿದ ಹೈಕಮಾಂಡ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುವಂತೆ ಭಾಸವಾಗುತ್ತಿತ್ತು.

ಹೈಕಮಾಂಡ್ ತಮಗೆ ಸಿಎಂ ಪಟ್ಟ ನೀಡಲಿದೆ ಎಂದು ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್​, ಬಸನಗೌಡ ಯತ್ನಾಳ್ ಹೆಚ್ಚು ಭರವಸೆ ಇಟ್ಟುಕೊಂಡಿದ್ದರು. ಆದರೆ, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಹೆಸರನ್ನು ಸಿಎಂ ಸ್ಥಾನಕ್ಕೆ ಸೂಚಿಸಿದಾಗ ಹೈಕಮಾಂಡ್​ನ ನಿಜವಾದ ಅಚ್ಚರಿ ಏನೆಂಬುದು ಹಲವರ ಅರಿವಿಗೆ ಬಾರದಿರಲಿಲ್ಲ.

ಇದನ್ನೂ ಓದಿ:ಕೋವಿಡ್ ನಿಯಂಣತ್ರಕ್ಕೆ ಮೊದಲ ಆದ್ಯತೆ, ಉತ್ತಮ ಆಡಳಿತಕ್ಕೆ ಹೆಚ್ಚಿನ ಒತ್ತು: ಬೊಮ್ಮಾಯಿ ಇಂಗಿತ

ABOUT THE AUTHOR

...view details