ಬೆಂಗಳೂರು: ಮಧ್ಯಪ್ರದೇಶ ಬಂಡಾಯ ಶಾಸಕರು ವಾಸ್ತವ್ಯ ಹೂಡಿರುವ ರಮಡಾ ರೆಸಾರ್ಟ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ರಾಜ್ಯದ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಭೇಟಿ ನೀಡುತ್ತಾರೆಂಬ ವದಂತಿ ಹಿನ್ನೆಲೆಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ರಮಡಾ ರೆಸಾರ್ಟ್ ಸುತ್ತ ಹೆಚ್ಚಿದ ಪೊಲೀಸ್ ಭದ್ರತೆ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು ಹಿನ್ನಲೆ ಮಧ್ಯಪ್ರದೇಶ ಸಿಎಂ ಕಮಲ್ ನಾಥ್ ರಾಜ್ಯಕ್ಕೆ ದೌಡಾಯಿಸುತ್ತಿದ್ದಾರೆ ಎನ್ನಲಾಗ್ತಿದೆ. ಕೆ.ಪಿ.ಸಿ.ಸಿ ಕಚೇರಿಯಲ್ಲಿ ಮಹತ್ವದ ಸಭೆ ಬಳಿಕ ಕಾಂಗ್ರೆಸ್ ನಾಯಕರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಎಲ್ಲಾ ತಯಾರಿಗಳು ಮತ್ತೊಂದು ರಾಜಕೀಯ ಹೈಡ್ರಾಮಾಕ್ಕೆ ವೇದಿಕೆಯಾಗ್ತಿವೆ.
ಯಲಹಂಕ ಸಮೀಪದ ಹೊನ್ನೇನಹಳ್ಳಿಯ ರಮಡ ರೆಸಾರ್ಟ್ನಲ್ಲಿ 22 ಮಧ್ಯಪ್ರದೇಶ ಶಾಸಕರನ್ನು ಭೇಟಿ ಮಾಡಲು ಬೆಳಗ್ಗೆ ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ ಸಿಂಗ್ ನಡೆಸಿದ ಪ್ರಯತ್ನ ವಿಫಲವಾಗಿತ್ತು. ನಂತರ ಬಂಡಾಯ ಶಾಸಕರು ವಿಡಿಯೋ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಶಾಸಕರ ಭೇಟಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ತಂಡ ರೆಡಿಯಾಗಿದ್ದು, ಪ್ರತಿಭಟನೆ ಮಾಡುತ್ತಾರೆ ಎನ್ನಲಾಗ್ತಿದೆ.
ದಿಗ್ವಿಜಯ ಸಿಂಗ್ ಭೇಟಿ ಪ್ರಯತ್ನ ವಿಫಲವಾದ ನಂತರ ಕಾಂಗ್ರೆಸ್ ಹೈಕಮಾಂಡ್ ನಿಂದ ರಾಜ್ಯ ಕಾಂಗ್ರೆಸ್ ನಾಯಕರ ಹೆಗಲಿಗೆ ಬಂಡಾಯ ಶಾಸಕರ ಮನವೊಲಿಸುವ ಜವಾಬ್ದಾರಿ ನೀಡಿದೆ ಎಂದು ಹೇಳಲಾಗುತ್ತಿದೆ.
ರಮಡಾ ರೆಸಾರ್ಟ್ ಬಳಿ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ. ಹೆಚ್ಚಿನ ಭದ್ರತೆ ನಿಟ್ಟಿನಲ್ಲಿ 10 ಕೆ.ಎಸ್.ಆರ್.ಪಿ, 5 ಡಿ.ಆರ್ ಮತ್ತು 300 ಪೊಲೀಸರನ್ನು ನಿಯೋಜಿಸಲಾಗಿದೆ.