ಕರ್ನಾಟಕ

karnataka

ETV Bharat / city

ಚಿಕಿತ್ಸೆಗೆ ನಿರಾಕರಿಸುವ ವೈದ್ಯರ ವಿರುದ್ಧ ದೂರು ಕೊಡಲು ಹೆಲ್ಪ್ ಲೈನ್ ಆರಂಭಿಸಿ: ಹೈಕೋರ್ಟ್ ಸೂಚನೆ

ಕೊರೊನಾ ಸೋಂಕಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸುತ್ತಿರುವ ವೈದ್ಯರ ವಿರುದ್ಧ ದೂರು ನೀಡಲು ಹೈಲ್ಪ್​ಲೈನ್ ಆರಂಭಿಸಬೇಕು ಎಂದು ಹೈಕೋರ್ಟ್, ಕರ್ನಾಟಕ ವೈದ್ಯಕೀಯ ಪರಿಷತ್​ಗೆ (ಕೆಎಂಸಿ) ನಿರ್ದೇಶಿಸಿದೆ.

By

Published : Aug 5, 2020, 9:58 PM IST

Helpline to file a complaint against a doctor who refuses treatment
ಚಿಕಿತ್ಸೆಗೆ ನಿರಾಕರಿಸುವ ವೈದ್ಯರ ವಿರುದ್ಧ ದೂರು ಕೊಡಲು ಹೆಲ್ಪ್ ಲೈನ್ ಆರಂಭಿಸಿ: ಕೆಎಂಸಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು:ಕೊರೊನಾ ಸೋಂಕಿಲ್ಲದ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸುತ್ತಿರುವ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಅಂತಹ ವೈದ್ಯರ ವಿರುದ್ಧ ದೂರು ನೀಡಲು ಕರ್ನಾಟಕ ವೈದ್ಯಕೀಯ ಪರಿಷತ್ (ಕೆಎಂಸಿ) ಹೈಲ್ಪ್​ಲೈನ್ ಆರಂಭಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಕೊರೊನಾ ಸೋಂಕಿನ ಲಕ್ಷಣವಿಲ್ಲದಿರುವ ರೋಗಿಗಳಿಗೂ ಚಿಕಿತ್ಸೆ ನೀಡಲು ಖಾಸಗಿ ವೈದ್ಯರು ಮತ್ತು ಆಸ್ಪತ್ರೆಗಳು ನಿರಾಕರಿಸುತ್ತಿವೆ ಎಂದು ಆರೋಪಿಸಿ ವಕೀಲ ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಕೆಎಂಸಿ ಪರ ವಕೀಲರು ವಾದಿಸಿ, ಚಿಕಿತ್ಸೆ ನಿರಾಕರಿಸುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕೊರೊನಾ ರಹಿತ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿರುವ ಬಗ್ಗೆ ಈವರೆಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ದೂರು ನೀಡಲು ಯಾವುದಾದರೂ ವ್ಯವಸ್ಥೆ ಮಾಡಲಾಗಿದೆಯೇ ಎಂದು ಕೆಎಂಸಿ ಪರ ವಕೀಲರನ್ನು ಪ್ರಶ್ನಿಸಿತು. ವಕೀಲರು ಸದ್ಯಕ್ಕೆ ಅಂತಹ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ಉತ್ತರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಚಿಕಿತ್ಸೆ ನಿರಾಕರಿಸುವ ವೈದ್ಯರ ವಿರುದ್ಧ ದೂರು ಸಲ್ಲಿಸಲು ವ್ಯವಸ್ಥೆಯೇ ಇಲ್ಲದಿದ್ದರೆ, ಯಾರು ದೂರು ನೀಡುತ್ತಾರೆ?. ಹೀಗಾಗಿ ಸಾರ್ವಜನಿಕರು ದೂರು ಸಲ್ಲಿಸಲು ಕೂಡಲೇ ಸಹಾಯವಾಣಿ ಆರಂಭಿಸಿ. ಅಂತೆಯೇ, ಚಿಕಿತ್ಸೆ ನಿರಾಕರಿಸದಂತೆ ವೈದ್ಯರಿಗೆ ತಾಕೀತು ಮಾಡಿ ಸುತ್ತೋಲೆ ಹೊರಡಿಸಿ ಎಂದು ಕರ್ನಾಟಕ ವೈದ್ಯಕೀಯ ಪರಿಷತ್‍ಗೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 15ಕ್ಕೆ ಮುಂದೂಡಿತು.

ABOUT THE AUTHOR

...view details