ಬೆಂಗಳೂರು:ಒಂದೆರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯನ ಆರ್ಭಟ ಮತ್ತೆ ಪ್ರಾರಂಭವಾಗಿದೆ. ನಾಳೆಯಿಂದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಮತ್ತು ರೆಡ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ.
ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ನಾಳೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮೇ 18 ರಂದು ಕರಾವಳಿಯಲ್ಲಿ ಭಾರಿ ಮಳೆ ಹಿನ್ನೆಲೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮೇ 19 ರಂದು ಕೂಡ ಆರೆಂಜ್ ಅಲರ್ಟ್ ಇದ್ದು, ಮೇ 20 ರಿಂದ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ತಿಳಿಸಿದೆ.
ಯಲ್ಲೋ ಅಲರ್ಟ್ ವೇಳೆಯಲ್ಲಿ ಮಳೆಯ ಪ್ರಮಾಣ 64.5 ಮಿ.ಮೀ ರಿಂದ 115.5 ಮಿ.ಮೀ ಇರಲಿದ್ದು, ಆರೆಂಜ್ ಅಲರ್ಟ್ನಲ್ಲಿ 115.6 ಮಿ.ಮೀ ನಿಂದ 204.4 ಮಿ.ಮೀ, ರೆಡ್ ಅಲರ್ಟ್ನಲ್ಲಿ ಮಳೆ ಪ್ರಮಾಣ 204.5 ಮಿ.ಮೀಗಿಂತ ಹೆಚ್ಚಿನ ಮಳೆಯಾಗುತ್ತದೆ ಎಂದು ಮಾಹಿತಿ ನೀಡಿದೆ.
ಉತ್ತರ ಒಳನಾಡಿನಲ್ಲಿ 4 ದಿನ ಹಗುರ ಮಳೆ:ಉತ್ತರ ಒಳನಾಡಿನ ಜಿಲ್ಲೆಗಳಿಗೆ ಮುಂದಿನ 4 ದಿನ ಹಗುರ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನ ಬಹುತೇಕ ಎಲ್ಲ ಜಿಲ್ಲೆಗಳಿಗೆ ಮೇ 17, 18 ರಂದು ಮತ್ತು ಮೇ 19, 20 ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ದ.ಕ ಜಿಲ್ಲಾಧಿಕಾರಿ ಎಚ್ಚರಿಕೆ:ನೀರು ಇರುವ ತಗ್ಗು ಪ್ರದೇಶ , ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗೃತೆ ವಹಿಸಬೇಕು. ಮೀನುಗಾರರಿಗೆ ಎಚ್ಚರಿಕೆ ನೀಡಿದ ದಿನಾಂಕದಂದು ಕಡ್ಡಾಯವಾಗಿ ಸಮುದ್ರಕ್ಕೆ ಇಳಿಯಬಾರದು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು.ಪ್ರವಾಸಿಗರು, ಸಾರ್ವಜನಿಕರು ನದಿ ತೀರ, ಸಮುದ್ರತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸುವಂತೆ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಓದಿ:ಅಂಡಮಾನ್ - ನಿಕೋಬಾರ್ ಪ್ರವೇಶಿಸಿದ ನೈರುತ್ಯ ಮಾನ್ಸೂನ್: ಹಲವು ರಾಜ್ಯಗಳಲ್ಲಿ ತಾಪಮಾನ ಕುಸಿತ