ಬೆಂಗಳೂರು :ಯಾಕೆ, ನಾನು ಆರೋಗ್ಯ ಸಚಿವ ಆಗಿದ್ದಕ್ಕೆ ಚಿಕ್ಕಬಳ್ಳಾಪುರ ಜನ ಸಾಯಬೇಕಾ.. ಪ್ರತಿ ಜಿಲ್ಲೆಗೂ ಬೆಡ್ ವ್ಯವಸ್ಥೆ ಮಾಡಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಗೂ ಮಾಡಿದ್ದೇವೆ ಅಷ್ಟೆ.. ಇದರಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ ಚಿಕ್ಕಬಳ್ಳಾಪುರಕ್ಕೆ ಬೆಂಗಳೂರಲ್ಲಿ ನೂರು ಬೆಡ್ ಕಾದಿಟ್ಟಿದ್ದೇವೆ. ಪ್ರತಿ ಜಿಲ್ಲೆಗೂ ಇದೇ ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿದರು.
ಚಿಕ್ಕಬಳ್ಳಾಪುರಕ್ಕೆ ಆಸ್ಪತ್ರೆ ಮೀಸಲಿಟ್ಟ ವಿಷಯಕ್ಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾಜಿ ಸಚಿವ ಕೃಷ್ಣ ಭೈರೇಗೌಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಅವರು ಯಾಕೆ ಪತ್ರ ಬರೆದಿದ್ದಾರೆ ಎಂಬುದು ನನಗೆ ಗೊತ್ತು.
ಈ ಬಗ್ಗೆ ನಾನು ಈಗ ಮಾತನಾಡಲ್ಲ. ಚಿಕ್ಕಬಳ್ಳಾಪುರ ಜನಕ್ಕೆ ಚಿಕಿತ್ಸೆ ಸಿಗಬಾರದಾ? ಎಂದು ಪ್ರಶ್ನಿಸಿದರು. ಕೋಲಾರದಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನಾ ಘಟಕ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಭಾರತ್ ಬಯೋಟೆಕ್‌ನವರಿಗೆ ಲಸಿಕೆ ಉತ್ಪಾದನೆಗೆ ಅವಕಾಶ ನೀಡಲಾಗಿದೆ. ಈಗಾಗಲೇ ಕೆಐಎಡಿಬಿ ಭೂಮಿ ಸಹ ನೀಡಲಾಗಿದೆ. ಐಸಿಎಂಆರ್, ಸಿಡಿಸಿಯಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದರು.