ಬೆಂಗಳೂರು:ಒಂದು ವೇಳೆ ರಾಜಿ ಮಾಡಿಕೊಂಡಿದ್ದರೆ ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಕಾಲ ಅಧಿಕಾರ ನಡೆಸಬಹುದಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಹೇಳಿದ್ದಾರೆ.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅಂದು ಸ್ವಾಭಿಮಾನಕ್ಕಾಗಿ ಮುಖ್ಯಮಂತ್ರಿ ಸ್ಥಾನ ಬಿಟ್ಟು ಹೊರ ಬಂದರು. ಒಂದು ವೇಳೆ ರಾಜಿಯಾಗಿದ್ದರೆ ಐದು ವರ್ಷ ಸಿಎಂ ಆಗಿ ಇರುತ್ತಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ ಎಂದರು.
ಎರಡನೇ ಬಾರಿ ಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು ಅವರ ವ್ಯಕ್ತಿತ್ವಕ್ಕೆ ಸಿಕ್ಕ ಗೌರವ. 80 ಶಾಸಕರನ್ನು ಹೊಂದಿದ್ದ ಪಕ್ಷಕ್ಕೆ ಕುಮಾರಸ್ವಾಮಿ ಅವರ ವಿಶಿಷ್ಟ ಗುಣದಿಂದಲೇ ಮುಖ್ಯಮಂತ್ರಿ ಸ್ಥಾನ ನೀಡಲು ಮುಂದೆ ಬಂದರು. ಏನೇ ಸಮಸ್ಯೆಗಳು ಎದುರಾದರೂ ಉತ್ತಮ ಆಡಳಿತವನ್ನು ನೀಡಿದ್ದಾರೆ ಎಂದು ಹೇಳಿದರು. ಈ ಹಿಂದೆ ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ, ಜನತಾ ದರ್ಶನ, ವಿಕಲಚೇತನರ ಬಗೆಗಿನ ಕಾಳಜಿ ಇವು ಜನ ಮೆಚ್ಚುಗೆಗೆ ಪಾತ್ರವಾದವು. ಅಧಿಕಾರ ಸಿಕ್ಕಾಗ ಆಡಳಿತ ನಡೆಸಬಹುದು ಎಂಬುದಕ್ಕೆ ಕುಮಾರಸ್ವಾಮಿ ಸ್ಪಷ್ಟ ನಿದರ್ಶನ ಎಂದರು.