ಬೆಂಗಳೂರು: ಐಟಿ ದಾಳಿ ಬಳಿಕ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ನಿವಾಸಕ್ಕೆ ಹೆಚ್.ಕೆ.ಪಾಟೀಲ್ ಹಾಗೂ ಶಿವರಾಮೇಗೌಡ ಆಗಮಿಸಿ ಕೆಲಕಾಲ ಮಾತುಕತೆ ನಡೆಸಿ ಐಟಿ ದಾಳಿಗಳ ಹಿಂದೆ ಕೇಂದ್ರ ಸರ್ಕಾರ ಕೈವಾಡ ಇದೆ ಎಂದು ದೂಷಿಸಿದರು.
ಐಟಿ ದಾಳಿ ಕುರಿತು ಹೆಚ್.ಕೆ.ಪಾಟೀಲ್ ಹಾಗೂ ಶಿವರಾಮೇಗೌಡ ಪ್ರತಿಕ್ರಿಯೆ ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಕೆ.ಪಾಟೀಲ್, ರಮೇಶ್ ನಿಷ್ಠಾವಂತ ಕೆಲಸಗಾರ. ಅವರ ಸಾವು ನಮಗೆ ಆಘಾತ ತಂದಿದೆ. ಅವರು ಸೂಕ್ಷ್ಮ ಜೀವಿ. ಈ ರೀತಿಯ ಶೋಷಣೆ ದೇಶದ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಇದು ನಿಲ್ಲಬೇಕು ಎಂದರು.
ನಂತರ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, ಜಾಲಪ್ಪ ಹಾಗೂ ಪರಮೇಶ್ವರ್ ಅವರ ತಂದೆ ಹಿಂದಿನ ಕಾಲದಿಂದಲೂ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಬಂದಿದ್ದಾರೆ. ಏನಾದರೂ ಲೋಪದೋಷಗಳು ಇದ್ದಲ್ಲಿ ಸರಿಪಡಿಸುವುದಕ್ಕೆ ಅನೇಕ ಮಾರ್ಗಗಳು ಇದ್ದವು. ಆದರೆ ಕೇಂದ್ರ ಸರ್ಕಾರ ಐಟಿ ಹಾಗೂ ಇಡಿ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡು ವಿರೋಧ ಪಕ್ಷದ ಪ್ರಭಾವಿ ನಾಯಕರನ್ನು ಕುಗ್ಗಿಸುವ ಪ್ರಯತ್ನದಲ್ಲಿದೆ ಎಂದು ಆರೋಪಿಸಿದರು.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಹಾಗೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಗೆ ಈ ಎಲ್ಲಾ ಕುತಂತ್ರಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇದೆ. ರಮೇಶ್ಗೆ ದುರ್ಬಲ ಮನಸ್ಸು ಇರುವ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಯಾವುದೇ ಪರಿಸ್ಥಿತಿ ಇರಲಿಲ್ಲ. ಹಾಗೂ ಪರಮೇಶ್ವರ್ ಧೈರ್ಯದಿಂದ ಇದ್ದಾರೆ. ಯಾವುದೇ ದಾಖಲಾತಿ ಹಾಗೂ ಪ್ರಶ್ನೆಗೆ ಸೂಕ್ತ ಉತ್ತರ ನೀಡುವ ವಿಶ್ವಾಸ ಹೊಂದಿದ್ದಾರೆ ಎಂದು ಶಿವರಾಮೇಗೌಡ ಹೇಳಿದರು.