ಬೆಂಗಳೂರು: ಲಾಭದಾಯಕ ಕೃಷಿ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಹಸಿರು ಮನೆ ವರದಾನವಾಗಿದೆ. ಕೀಟ ಬಾಧೆ, ಹವಾಮಾನ ವೈಪರೀತ್ಯಗಳ ಯಾವುದೇ ತೊಂದರೆ ಇಲ್ಲದೆ ಗುಣಮಟ್ಟದ ಇಳುವರಿ ಪಡೆಯಬಹುದು.
ಹಸಿರು ಮನೆಯಲ್ಲಿ ಕೃಷಿ: ಖರ್ಚು ಸ್ವಲ್ಪ ಹೆಚ್ಚಿದ್ದರೂ ಲಾಭ ಮಾತ್ರ ಪಕ್ಕಾ! - ಓಪನ್ ಫೀಲ್ಡ್ನಲ್ಲಿ ಕೃಷಿ
ಹವಾಮಾನ ವೈಪರೀತ್ಯದಿಂದ ಬೆಳೆ ನಾಶ, ಕೀಟ ಬಾಧೆ ಇವ್ಯಾವುದರ ಕಾಟವೂ ಈ ಕೃಷಿ ವಿಧಾನದಲ್ಲಿ ಇರುವುದಿಲ್ಲ. ತುಸು ಖರ್ಚು ಹೆಚ್ಚೇ ಆದರೂ ಬೆಳೆ ಮಾತ್ರ ಕೈಗೆ ಸಿಗೋದು ಗ್ಯಾರಂಟಿ. ಹೌದು, ಅದುವೇ ಹಸಿರು ಮನೆ ಕೃಷಿ.
ಓಪನ್ ಫೀಲ್ಡ್ನಲ್ಲಿ ಕೃಷಿ ಮಾಡುವಾಗ ಹವಾಮಾನದ ವೈಪರಿತ್ಯಗಳಾದ ಗಾಳಿ, ಮಳೆ ಮತ್ತು ಬಿಸಿಲು ಹೆಚ್ಚು ಕಡಿಮೆ ಆದಾಗ ಬೆಳೆಗಳ ಮೇಲೆ ಪರಿಣಾಮ ಬೀರುತ್ತೆ. ಇದರ ಜೊತೆಗೆ ಕೀಟಗಳ ಹಾವಳಿ ಸಹ ಬೆಳೆಗಳ ಮೇಲೆ ಪರಿಣಾಮ ಬೀರುತ್ತೆ. ಹಸಿರು ಮನೆ ನಿರ್ಮಾಣದಿಂದ ಇವುಗಳ ತೊಂದರೆ ಇಲ್ಲದೆ ಗುಣಮಟ್ಟದ ಬೆಳೆ ಪಡೆಯಬಹುದು.
ಅಂದಹಾಗೆ ಹಸಿರು ಮನೆ ನಿರ್ಮಾಣ ರೈತರ ಪಾಲಿಗೆ ದುಬಾರಿ. ಅಧಿಕ ಬಂಡವಾಳದ ಹಸಿರು ಮನೆಯಲ್ಲಿ ಅಧಿಕ ಲಾಭ ಪಡೆಯುವ ಬಗ್ಗೆ ಜಿಕೆವಿಕೆ ಕೃಷಿ ವಿಜ್ಞಾನಿಗಳು ನೀರಿನ ಕೊಯ್ಲು ಮತ್ತು ಅಂತರ ಬೆಳೆಗಳನ್ನು ಬೆಳೆದಿದ್ದಾರೆ. ಬಾಳೆ ಮತ್ತು ಪಪ್ಪಾಯಿ ವಾರ್ಷಿಕ ಬೆಳೆಗಳಾಗಿದ್ದು, ಇವುಗಳ ನಡುವೆ ತರಕಾರಿ ಬೆಳೆಗಳಾದ ಕ್ಯಾಪ್ಸಿಕಂ, ಟೊಮ್ಯಾಟೋ, ಬೀನ್ಸ್, ಸೌತೆಕಾಯಿ ಬೆಳೆಗಳನ್ನು ಬೆಳೆದಿದ್ದಾರೆ. ಬಾಳೆ ಮತ್ತು ಪಪ್ಪಾಯಿಗೆ ಕಡಿಮೆ ನೀರು ಸಾಕಾಗುತ್ತದೆ. ತರಕಾರಿ ಬೆಳೆಗಳಿಗೆ ಕೊಡುವಷ್ಟು ನೀರು ಕೊಟ್ಟರೆ ಸಾಕು. ಬಾಳೆ ದೊಡ್ಡದಾಗಿ 3ರಿಂದ 4 ತಿಂಗಳಲ್ಲಿಯೇ ಇಳುವರಿ ಪಡೆಯಬಹುದು. ಎರಡನೇ ಕ್ರಮದಲ್ಲಿ ಸೌತೆಕಾಯಿ, ಬೀನ್ಸ್ಗಳನ್ನು ಮೇಲ್ಮುಖವಾಗಿ ಬೆಳೆಯುವುದರಿಂದ ಸ್ಥಳದ ಸದ್ಬಳಕೆ ಮಾಡಬಹುದು ಎಂದು ಕೃಷಿ ವಿಜ್ಞಾನಿಗಳು ಪ್ರಯೋಗದಲ್ಲಿ ಸಾಬೀತು ಮಾಡಿದ್ದಾರೆ.