ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಕುವೆಂಪು, ಬಸವಣ್ಣ ಹಾಗೂ ನಾಡಗೀತೆಗೆ ಅಪಮಾನ ಮಾಡಲಾಗಿದೆ ಎನ್ನುವ ಆರೋಪಗಳು, ಹೆಡ್ಗೇವಾರ್ ವಿಷಯ ಸೇರ್ಪಡೆ ಸೇರಿದಂತೆ ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ಎತ್ತಲಾಗಿದ್ದ ಆಕ್ಷೇಪಗಳ ಕುರಿತ 13 ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟೀಕರಣ ನೀಡಿದೆ. ಸಮಿತಿಯನ್ನು ಸಮರ್ಥನೆ ಮಾಡಿಕೊಂಡು ಸುದೀರ್ಘ ವಿವರಣೆ ನೀಡಿದೆ.
ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಯ ವಿಷಯವಾಗಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸರ್ಕಾರ ತೆರೆ ಎಳೆದಿದೆ. ಈ ಸಂಬಂಧ ವ್ಯಕ್ತವಾಗಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರವನ್ನು ಪತ್ರಿಕಾ ಹೇಳಿಕೆ ಮೂಲಕ ಪ್ರಕಟಿಸಿ ಅಧಿಕೃತವಾಗಿ ಸ್ಪಷ್ಟೀಕರಣ ನೀಡಿದೆ.
ಸರ್ಕಾರದ ಸ್ಪಷ್ಟೀಕರಣ:ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿತ್ವಕ್ಕೆ ಅವಮಾನವಾದಂತೆ ಬರೆಯಲಾಗಿದೆ. (4ನೇ ತರಗತಿಯ ಪರಿಸರ ಅಧ್ಯಯನದ ಪಠ್ಯಪುಸ್ತಕದಲ್ಲಿ ಕುವೆಂಪು ಅವರ ಪರಿಚಯ ಮಾಡಿಸುವ ವಿಷಯಾಂಶದಲ್ಲಿ 'ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನ್ನಿಸಿಕೊಂಡರು' ಎಂದು ಬರೆದಿರುವ ಸಾಲುಗಳ ಬಗ್ಗೆ):
1 ರಿಂದ 5ನೇ ತರಗತಿಗಳ ಪರಿಸರ ಅಧ್ಯಯನ ಪಠ್ಯಪುಸ್ತಕಗಳನ್ನು ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಮಾಡಿರುವುದಿಲ್ಲ. 4ನೇ ತರಗತಿಗೆ ಸಂಬಂಧಿಸಿದ ಸದರಿ ವಿಷಯ 2014-15ರಲ್ಲಿ ಪ್ರೊ. ಮುಡಂಬಡಿತ್ತಾಯ ಸಮಿತಿ ರಚಿಸಿದ: ಪಠ್ಯ ಹಾಗೂ ಪ್ರೊ. ಬರಗೂರುರವರ ಸಮಿತಿಯು ಪರಿಷ್ಕರಿಸಿದೆ. ಪಠ್ಯಗಳಲ್ಲಿ ಇದ್ದದ್ದು ಹಾಗೆಯೇ ಮುಂದುವರೆದಿದೆ. 2014-15 ಸಾಲಿನಿಂದಲೂ ಸದರಿ ಪಠ್ಯ ಪುಸ್ತಕ ಜಾರಿಯಲ್ಲಿದ್ದರೂ, ಈ ಕುರಿತು ಯಾವುದೇ ವಿವಾದ ಆಗಿರಲಿಲ್ಲ.
ಕುವೆಂಪು ಬರಹಗಳನ್ನು ಪಠ್ಯ ಪರಿಷ್ಕರಣೆ ವೇಳೆ ಕೈಬಿಟ್ಟ ಬಗ್ಗೆ:ಪ್ರೊ. ಮುಡಂಬಡಿತ್ತಾಯ ಸಮಿತಿಯು ರಚಿಸಿದ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ, ಕುವೆಂಪುರವರ ಒಟ್ಟು 8 ಪಾಠ ಪದ್ಯಗಳಿದ್ದವು. ಪ್ರೊ. ಬರಗೂರು ಸಮಿತಿ ಕನ್ನಡ ಪ್ರಥಮ ಭಾಷೆ. ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆ ಸೇರಿ ಕುವೆಂಪುರವರ ಪಾಠ ಕಡಿಮೆ ಮಾಡಿ ಒಟ್ಟು 1 ಬರಹವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿತ್ತು. ರೋಹಿತ್ ಚಕ್ರತೀರ್ಥ ಅವರು ಪರಿಷ್ಕರಿಸಿದ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಹೊಸದಾಗಿ ಕುವೆಂಪು ಅವರ 3 ಪಾಠ, ಪದ್ಯಗಳನ್ನು ಸೇರಿಸಲಾಗಿದೆ.
ಭಗತ್ ಸಿಂಗ್ ಪಾಠವನ್ನು ಕೈಬಿಡಲಾಗಿದೆ ಎಂಬ ಆರೋಪ:2021-22 ಸಾಲಿನ ಕನ್ನಡ ಪ್ರಥಮ ಭಾಷೆ ಪಠ್ಯಪುಸ್ತಕದಲ್ಲಿ ಇದ್ದ ಭಗತ್ ಸಿಂಗ್ ಪಾಠವು (ಲೇಖಕರು: ಜ ರಾಮಕೃಷ್ಣ) ಪರಿಷ್ಕೃತ ಪಠ್ಯಪುಸ್ತಕದಲ್ಲಿ ಮುಂದುವರೆದಿದೆ. ಭಗತ್ ಸಿಂಗ್ ಕುರಿತು ಸಮಾಜ ವಿಜ್ಞಾನ 7ನೇ ತರಗತಿ ಹಾಗೂ 10ನೇ ತರಗತಿ ಪಠ್ಯಪುಸ್ತಕಗಳಲ್ಲಿ ಮಾಹಿತಿ ನೀಡಲಾಗಿದೆ.
ನಾರಾಯಣ ಗುರು ಹಾಗೂ ಪೆರಿಯಾರ್ ಪಠ್ಯವನ್ನು ತೆಗೆದು ಹಾಕಿರುವ ಬಗ್ಗೆ:ಕಳೆದ ಸಾಲಿನ 10ನೇ ತರಗತಿ ಸಮಾಜ-ವಿಜ್ಞಾನ ಪಠ್ಯಪುಸ್ತಕದಲ್ಲಿ ಶ್ರೀ ನಾರಾಯಣ ಗುರು ಹಾಗೂ ಪೆರಿಯಾರ್ ವಿಷಯಾಂಶವನ್ನು ನೀಡಲಾಗಿತ್ತು. ಪರಿಷ್ಕರಣೆ ಸಂದರ್ಭದಲ್ಲಿ ಮಕ್ಕಳಿಗೆ ಸಮಾಜ ವಿಜ್ಞಾನ ಪಠ್ಯಗಳಲ್ಲಿ ವಿಷಯಾಂಶಗಳ ಹೊರೆ ಎಂಬ ದೂರುಗಳು ಇದ್ದುದ್ದರಿಂದ ಸಮಾಜ ವಿಜ್ಞಾನದ ಕೆಲವು ಘಟಕಗಳನ್ನು ಸಂಪೂರ್ಣವಾಗಿ ಕೈಬಿಡಲಾಗಿತ್ತು.
ಕೆಲವನ್ನು ಸಂಕ್ಷಿಪ್ತಗೊಳಿಸಲಾಗಿತ್ತು ಹಾಗೂ ಕೆಲವನ್ನು ಬೇರೆ ವಿಷಯಗಳಿಗೆ ವರ್ಗಾಯಿಸಲಾಗಿದೆ. ಅದರಂತೆ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ನಾರಾಯಣಗುರು ಹಾಗೂ ಪೆರಿಯಾರ್ ವಿಷಯಾಂಶಗಳನ್ನು 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು ಎಂಬ ಪಾಠದಲ್ಲಿ ನೀಡಲಾಗಿದೆ.
ಟಿಪ್ಪು ಸುಲ್ತಾನ್ ಕುರಿತ ಪಾಠಗಳನ್ನು ತೆಗೆದಿರುವ ಆರೋಪ:ಕಳೆದ ಸಾಲಿನ ಸಮಾಜ ವಿಜ್ಞಾನ 1, 7 ಹಾಗೂ 10ನೇ ತರಗತಿಯ ಪಠ್ಯಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಕುರಿತು ಪಾಠಗಳನ್ನು ನೀಡಲಾಗಿತ್ತು. ಪರಿಷ್ಕೃತ 6, 7 ಹಾಗೂ 10ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲೂ ಟಿಪ್ಪು ಸುಲ್ತಾನ್ ಪಾಠಗಳನ್ನು ಉಳಿಸಿಕೊಳ್ಳಲಾಗಿದೆ.
ಬಸವಣ್ಣನವರನ್ನು ಕುರಿತು ವಿವಾದಾತ್ಮಕ ಅಂಶ ಆರೋಪ: ಹಿಂದಿನ ಪಠ್ಯಪುಸ್ತಕದಲ್ಲಿದ್ದ ಬಸವೇಶ್ವರ ಪಾಠ ಹಾಗೂ ಈಗ ಅಳವಡಿಸಿರುವ ಪಾಠ ಎರಡರಲ್ಲಿಯೂ 'ವೀರಶೈವ ಧರ್ಮ' ಎಂಬ ಉಲ್ಲೇಖವಿದೆ. ಎರಡೂ ಪಠ್ಯ ಪುಸ್ತಕದಲ್ಲಿ ಬಸವಣ್ಣನವರು ಲಿಂಗದೀಕ್ಷೆ ಪಡೆದರು ಎಂಬ ಉಲ್ಲೇಖವಿದೆ.