ಬೆಂಗಳೂರು :ಅಪಾರ್ಟ್‍ಮೆಂಟ್‍ಗಳಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡು ಪಾರ್ಟ್ ಟೈಮ್ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರು ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ನಾಲ್ವರು ಸೇರಿ ಐದು ಮನೆಗಳ್ಳರ ಬಂಧನ ನೇಪಾಳ ಮೂಲದ ಮೀನಾರಾಜ್ ಭಟ್(37) ಸಹೋದರ ತುಲಾರಾಮ್ ಭಟ್(33), ನಾರಾಯಣ ಶ್ರೇಷ್ಟ (46), ಶಿವ ಭಂಡಾರಿ(37) ಮತ್ತು ಗೋವಿಂದಪುರ ನಿವಾಸಿ ಸಲೀಂ ಪಾಷಾ(24) ಬಂಧಿತರು. 10.89 ಲಕ್ಷ ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣ, 1290 ಗ್ರಾಂ ಬೆಳ್ಳಿಯ ವಸ್ತುಗಳು, ಎಂಟು ವಿದೇಶಿ ಕರೆನ್ಸಿಗಳು, 12,000 ರೂ. ನಗದು, ಒಂದು ಕಾರು, ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಮೂರು ಕನ್ನಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಸಲೀಂ ಪಾಷಾ ಹಳೇ ಆರೋಪಿಯಾಗಿದ್ದು, ಈತನ ವಿರುದ್ಧ ನಗರದ ನಾನಾ ಠಾಣೆಗಳಲ್ಲಿ ಮನೆಗಳವು ಪ್ರಕರಣ ದಾಖಲಾಗಿವೆ. ಇತರ ಆರೋಪಿಗಳು ಗೋವಿಂದಪುರ ಠಾಣೆ ವ್ಯಾಪ್ತಿಯ ಅಪಾರ್ಟ್‍ಮೆಂಟ್‍ಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದಾರೆ.
ಈ ಮಧ್ಯೆ, ಭದ್ರತಾ ಸಿಬ್ಬಂದಿಗೆ ಸಲೀಂ ಪಾಷಾನ ಪರಿಚಯವಾಗಿದೆ. ಸಲೀಂ ನೇಪಾಳ ಮೂಲದವರಿಗೆ ಇಂತಿಷ್ಟು ಕಮಿಷನ್ ಕೊಡುವುದಾಗಿ ಹೇಳಿ ಕೃತ್ಯಕ್ಕೆ ಸಹಕಾರ ನೀಡುವಂತೆ ಕೋರುತ್ತಿದ್ದ. ಈ ಹಿನ್ನೆಲೆಯಲ್ಲಿ ಆರೋಪಿಗಳು ತಾವು ಕೆಲಸ ಮಾಡುವ ಮನೆ ಮಾಲೀಕರ ಚಟುವಟಿಕೆಗಳು ಮತ್ತು ಮನೆಯ ನಕಲಿ ಕೀಗಳನ್ನು ಸಂಗ್ರಹಿಸುತ್ತಿದ್ದರು.
ಮನೆಯವರು ಕಾರ್ಯನಿಮಿತ್ತ ಹೊರಗಡೆ ಅಥವಾ ಊರಿಗೆ ಹೋದಾಗ ಸಲೀಂ ಪಾಷಾನಿಗೆ ಮಾಹಿತಿ ನೀಡುತ್ತಿದ್ದರು. ಬಳಿಕ ಪಾಷಾ, ನಕಲಿ ಕೀ ಬಳಸಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೋಜು-ಮಸ್ತಿಗಾಗಿ ಕಳ್ಳತನ :ಆರೋಪಿಗಳು ಬಂದ ಹಣದಲ್ಲಿ ಮೋಜು-ಮಸ್ತಿಗಾಗಿ ಹಣ ವ್ಯಯಿಸುತ್ತಿದ್ದರು. ಬಾಕಿ ಹಣವನ್ನು ನೇಪಾಳದಲ್ಲಿರುವ ತಮ್ಮ ಸಂಬಂಧಿಗಳಿಗೆ ಕಳುಹಿಸುತ್ತಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ನೇಪಾಳಕ್ಕೆ ಪರಾರಿ : ಸಲೀಂ ಪಾಷಾನಿಂದ ಕಮಿಷನ್ ಲೆಕ್ಕದಲ್ಲಿ ನಗದು, ಚಿನ್ನಾಭರಣ ಪಡೆಯುತ್ತಿದ್ದ ಭದ್ರತಾ ಸಿಬ್ಬಂದಿಗಳು ಇತ್ತೀಚೆಗೆ ಕೃತ್ಯವೆಸಗಿ ನೇಪಾಳಕ್ಕೆ ಪರಾರಿಯಾಗಲಿದ್ದರು. ಈ ಮಾಹಿತಿ ಪಡೆದ ಗೋವಿಂದಪುರ ಠಾಣೆ ಇನ್‍ಸ್ಪೆಕ್ಟರ್ ಆರ್ ಪ್ರಕಾಶ್ ಮತ್ತು ಪಿಎಸ್‍ಐ ಇಮ್ರಾನ್ ಅಲಿ ಖಾನ್ ನೇತೃತ್ವದ ತಂಡ ರಾಜ್ಯದ ಗಡಿಯಲ್ಲಿಯೇ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.