ಬೆಂಗಳೂರು: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಕುರಿತಾದ ಮಾಹಿತಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ನೀಡಿದರು.
ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ತಮಿಳುನಾಡು ಮತ್ತು ರಾಜಸ್ಥಾನದಿಂದ ಕರ್ನಾಟಕಕ್ಕೆ ಬರುವವರಿಗೆ ಇನ್ನೂ 15 ದಿನಗಳ ಕಾಲ ನಿಷೇಧ ಹೇರಲಾಗಿದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ರಾಜ್ಯದ ಜನರಿಗೆ ಕೋವಿಡ್ ಪರಿಹಾರವಾಗಿ ಇತ್ತೀಚೆಗೆ ಘೋಷಿಸಿದ್ದ ಅನುದಾನ ಹಂಚಿಕೆ ಕುರಿತು ಸಚಿವರು ಮಾಹಿತಿ ನೀಡಿದರು. ಈವರೆಗೆ ಯಾರಿಗೂ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲವೆಂಬ ಆರೋಪಗಳು ಕೇಳಿಬಂದ ಹಿನ್ನೆಲೆ ಸಚಿವರು ಪ್ರತಿಕ್ರಿಯಿಸಿ, ಈ ಪರಿಹಾರ ಪಡೆಯಲು ಹೇರಿದ್ದ ನಿಯಮಗಳನ್ನು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.