ಬೆಂಗಳೂರು:ಕಳೆದ ಬಾರಿ ಅರಿಶಿನ ಗಣಪ ಅಭಿಯಾನ ನಡೆಸುವುದರೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಮೆರೆದಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣೇಶ ಉತ್ಸವ ಸಮಿತಿ ಈ ಬಾರಿ ಮಣ್ಣಿನ ಗಣಪ ತಯಾರು ಮಾಡಲು ಮುಂದಾಗಿದೆ.
ಮಣ್ಣಿನ ಗಣಪ ಅಭಿಯಾನದ ಮೂಲಕ ಪರಿಸರ ಸ್ನೇಹಿ ಗಣಪ ಹಬ್ಬ 2022 ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬೆಂಗಳೂರು ಗಣೇಶ ಉತ್ಸವ ಸಮಿತಿಯ ನಂದೀಶ್ ಎಸ್. ಮರಿಯಪ್ಪ ತಿಳಿಸಿದ್ದಾರೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿಯೂ ಪಿಒಪಿ ಗಣೇಶ ಮೂರ್ತಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರು ಬಣ್ಣ ರಹಿತ ಮತ್ತು ಪರಿಸರ ಸ್ನೇಹಿಯಾದ ಮಣ್ಣಿನ ಸೀಡ್ಸ್ ಗಣಪನನ್ನೇ ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸ್ಥಳದಲ್ಲೇ ಮಣ್ಣಿನ ಗಣಪ ತಯಾರಿಕಾ ತರಬೇತಿ: ಆ. 28 ರಂದು ಮಧ್ಯಾಹ್ನ 3 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಶ್ರೀ ವಿದ್ಯಾರಣ್ಯ ಯುವಕ ಸಂಘ ಮತ್ತು ಬೆಂಗಳೂರು ಗಣೇಶ ಉತ್ಸವ ಸಂಘಟನೆಯ ಸಹಭಾಗಿತ್ವದಲ್ಲಿ 10 ಸಾವಿರ ಮಣ್ಣಿನ ಗಣಪನನ್ನು ತಯಾರಿಸಲು ತರಬೇತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸುವವರಿಗೆ ಮಣ್ಣಿನ ಗಣಪನನ್ನು ತಯಾರಿಸಲು ಸ್ಥಳದಲ್ಲೇ ಕಲಿಸಿಕೊಡಲಾಗುತ್ತದೆ ಎಂದರು.