ಬೆಂಗಳೂರು: ಉಚಿತವಾಗಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸುವ ಕೆಲಸಕ್ಕೆ ನಾಳೆ ಕೊನೆಯ ದಿನ ಎಂದು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾಲ್ಕು ದಿನಗಳಲ್ಲಿ 3500 ಬಸ್ಗಳಲ್ಲಿ ಸುಮಾರು ಒಂದು ಲಕ್ಷ ಜನರನ್ನು ಅವರವರ ಊರುಗಳಿಗೆ ಕಳುಹಿಸಲಾಗಿದೆ. ಈ ವೇಳೆ ಭಯ ಪಡದೆ ಸಾರಿಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ತಮ್ಮ ಜೀವದ ಭಯವನ್ನೂ ಲೆಕ್ಕಿಸದೆ ವೈದ್ಯರು, ಆಶಾ ಕಾರ್ಯಕರ್ತೆಯರು, ಸಾರಿಗೆ ಸಿಬ್ಬಂದಿ ಕೆಲಸ ಮಾಡಿದ್ದಾರೆ. ಅಂತಹ ಸಿಬ್ಬಂದಿ ಹಾಗೂ ಆ ತಂಡಕ್ಕೆ ಅಭಿನಂದನೆ ಸಲ್ಲಿಸುವ ಕೆಲಸವನ್ನು ಸರ್ಕಾರದ ವತಿಯಿಂದ ಮಾಡಿದ್ದೇವೆ.
ಸಂಘ ಸಂಸ್ಥೆಗಳು ಬ್ರೆಡ್ ಹಾಗೂ ಆಹಾರವನ್ನು ಕೂಡ ಸಾಕಷ್ಟು ಜನರಿಗೆ ಕೊಟ್ಟಿದ್ದಾರೆ. ಮಾಧ್ಯಮದವರೂ ಕೂಡ ನಮ್ಮ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾನು ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸಾರಿಗೆ ಸಿಬ್ಬಂದಿಗೆ ಸಂಬಳವಾಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಾರಿಗೆ ಇಲಾಖೆಯ ಸಿಬ್ಬಂದಿ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.
ನಾನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತನಾಡಿದ್ದು, ನೇರವಾಗಿ ಸರ್ಕಾರದಿಂದ 326 ಕೋಟಿ ರೂ.ಗಳನ್ನು ಪಡೆದುಕೊಂಡು ಸಂಬಳ ಕೊಡುವ ಕೆಲಸ ಮಾಡುತ್ತೇವೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ನೌಕರರ ಅಕೌಂಟ್ಗೆ ಹಣ ತಲುಪಲಿದೆ ಎಂದು ಭರವಸೆ ನೀಡಿದರು.