ಕರ್ನಾಟಕ

karnataka

ETV Bharat / city

ಉದ್ಯಾನ ನಗರಿಯ ಫ್ರೀಡಂ ಪಾರ್ಕ್​ ಈಗ ಮಿನಿ ಝೂ! - Bangalore

ಸಿಲಿಕಾನ್​ ಸಿಟಿಯ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್​ನಲ್ಲಿ ಇದೀಗ ಪ್ರಾಣಿ-ಪಕ್ಷಿಗಳ ಕಲರವ ಕೇಳುತ್ತಿದೆ. ಪಾರ್ಕ್​ ಈಗ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತಿದೆ.

ಫ್ರೀಡಂ ಪಾರ್ಕ್

By

Published : Mar 11, 2019, 5:28 PM IST

ಬೆಂಗಳೂರು: ಫ್ರೀಡಂ ಪಾರ್ಕ್...‌ ಬೆಂಗಳೂರಿನ ಮಧ್ಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನ. ಇದು ಕೇವಲ ಪ್ರತಿಭಟನೆಗಷ್ಟೇ ಸೀಮಿತವಲ್ಲ. ಮೇಳಗಳನ್ನು ನಡೆಸಲಷ್ಟೇ ಇರುವ ಜಾಗವಲ್ಲ. ಇಲ್ಲಿ ಇದೀಗ ಪ್ರಾಣಿ-ಪಕ್ಷಿಗಳ ಕಲರವ ಕೇಳುತ್ತಿದೆ.

ಹೌದು, ಫ್ರೀಡಂ ಪಾರ್ಕ್ ಇದೀಗ ಪ್ರಾಣಿ ಸಂಗ್ರಹಾಲಯ ಹಾಗೂ ಔಷಧ ಸಸ್ಯಗಳ ತಾಣವಾಗಿದೆ. ಕಳೆದ ಆರು ತಿಂಗಳ ಹಿಂದೆ ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಿನಿ ಪ್ರಾಣಿ ಸಂಗ್ರಹಾಲಯ ಆರಂಭಿಸಲು ನಿರ್ಧರಿಸಿದ್ದರು. ಅದರ ಪರಿಣಾಮ ಈಗ ಸಂಗ್ರಹಾಲಯದಲ್ಲಿ ಮೊಲ, ಟರ್ಕಿ ಕೋಳಿಗಳು, ಬಾತು ಕೋಳಿಗಳು, ಗಿನೀ ಫೌವ್ಲ್​ಗಳು​ ಪ್ರತಿ ದಿನ ಬರುವವರನ್ನು ಹಾಗೂ ವಾರಾಂತ್ಯದಲ್ಲಿ ಬರುವ ಮಕ್ಕಳನ್ನು ಆಕರ್ಷಿಸುತ್ತಿವೆ. ಮುಂದಿನ ದಿನಗಳಲ್ಲಿ ಅಕ್ವೇರಿಯಂ ಕೂಡ ಇಲ್ಲಿ ಬರಲಿದೆ ಎನ್ನುತ್ತಾರೆ ಉದ್ಯಾನದ ಹಿರಿಯ ಪಾಲಕರಾದ ಸೋಮಶೇಖರ್.

ಫ್ರೀಡಂ ಪಾರ್ಕ್​ನಲ್ಲಿ ಪ್ರಾಣಿ-ಪಕ್ಷಿಗಳ ಕಲರವ

ಇಷ್ಟೇ ಅಲ್ಲ, ಉದ್ಯಾನವನದಲ್ಲಿ ಬೃಹತ್ ಮರಗಳಿವೆ. ಅವುಗಳ ನೆರಳಲ್ಲಿ ಔಷಧ ಗಿಡ-ಮರಗಳನ್ನುಸಹ ಬೆಳೆಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಔಷಧೀಯ ಗುಣವುಳ್ಳ ಹತ್ತು ಸಾವಿರ ಗಿಡಗಳನ್ನು ನೆಡಲಾಗಿದೆ. ನಶಿಸಿ ಹೋಗುತ್ತಿರುವ ಬರ್ಸಿ, ಆಲದ ಮರ, ಲಿಂಗಾಳಿ ಪುಷ್ಪ, ರುದ್ರಾಕ್ಷಿ ಗಿಡ, ಸರ್ಪಗಂಧಿ, ನಾಯಿಕಬ್ಬು, ಅಮೃತಬಳ್ಳಿ, ಇನ್ಸುಲಿನ್, ಬಸವನಪಾದ ಗಿಡ ಸೇರಿದಂತೆ ಹಲವು ಬಗೆಯ ಗಿಡಗಳು ಇಲ್ಲಿವೆ. ಈಗಾಗಲೇ ಹುಟ್ಟಿದ ದಿನ, ಮದುವೆ ವಾರ್ಷಿಕೋತ್ಸವ ಹಾಗೂ ವಿಶೇಷ ಸಂದರ್ಭಗಳ ನೆನಪಿನಾರ್ಥ ಸ್ವಾತಂತ್ರ್ಯ ಉದ್ಯಾನವನದಲ್ಲಿ ಗಿಡಗಳನ್ನು ನೆಡಲು ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತಾರೆ ಕ್ಯಾಪ್ಟನ್ ಸೋಮಶೇಖರ್.

ಹಾಗೇಯೆ, ಅಳಿವಿನಂಚಿನಲ್ಲಿರುವ ಪಕ್ಷಿಗಳ ಪ್ರಬೇಧಗಳನ್ನು ಇಲ್ಲಿ ತರಲಾಗುವುದು. ಈಗಾಗಲೇ, ಗುಬ್ಬಚ್ಚಿ, ಲವ್ ಬರ್ಡ್ ಸೇರಿದಂತೆ 150ಕ್ಕೂ ಹೆಚ್ಚು ಬಗೆಯ ಪಕ್ಷಿಗಳನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಪ್ರಾಣಿ-ಪಕ್ಷಿಗಳಿಗಾಗಿ ಕುಡಿಯುವ ನೀರು, ಪಿಜನ್ ಟವರ್​ಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಉದ್ಯಾನವನ ಸಂಗ್ರಹಾಲಯವಾಗಿ ಕಂಗೊಳಿಸಲಿದೆ ಎಂಬುದು ಸೋಮಶೇಖರ್ ಅಭಿಪ್ರಾಯ.

ABOUT THE AUTHOR

...view details