ಬೆಂಗಳೂರು:ಸಿಲಿಕಾನ್ ಸಿಟಿಯ ಅಪರಾಧ ಲೋಕದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಅಲಾಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣವನ್ನು ಆರ್ ಟಿ ನಗರ ಪೊಲೀಸರು ತ್ವರಿತಗತಿಯಲ್ಲಿ ಬೇಧಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಸಾಯನ್ ವಿವಿ ಮಾಲೀಕರಲ್ಲಿ ಓರ್ವರಾದ ಸುಧೀರ್ ಅಂಗೂರ್ ಹಾಗೂ ಸೂರಜ್ ಸಿಂಗ್ ಬಂಧಿತ ಆರೋಪಿಗಳು. ಇವರು ವಿವಿಯ ಮಾಲೀಕತ್ವಕ್ಕಾಗಿ ಅಯ್ಯಪ್ಪ ದೊರೆಯನ್ನು ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್ಎಂಟಿ ಮೈದಾನದಲ್ಲಿ ವಾಯು ವಿಹಾರ ಮಾಡುತ್ತಿದ್ದ ವಿಶ್ರಾಂತ ಕುಲಪತಿ ಅಯ್ಯಪ್ಪ ದೊರೆಯನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರ ಸ್ವರೂಪ ಅರಿತ ಆಯುಕ್ತರು, ಉತ್ತರ ವಿಭಾಗದ ಡಿಸಿಪಿ ಕೆ. ಶಶಿಕುಮಾರ್ ನೇತೃತ್ವದಲ್ಲಿ ಎಂಟು ವಿಶೇಷ ತಂಡಗಳನ್ನು ರಚಿಸಿದ್ದರು. ಈ ತಂಡ ಹಂತಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಅಲಾಯನ್ಸ್ ವಿವಿಯನ್ನು ತಮ್ಮದಾಗಿಸಿಕೊಳ್ಳಲು ಹಲವು ವರ್ಷಗಳಿಂದ ಆರೋಪಿ ಸುಧೀರ್ ಅಂಗೂರ್ ಹಾಗೂ ಸಹೋದರ ಮಧುಕರ್ ಅಂಗೂರ್ ನಡುವೆ ವೈಷಮ್ಯ ಉಂಟಾಗಿತ್ತು. 2013ರ ಬಳಿಕ ಅಯ್ಯಪ್ಪ ದೊರೆ ಪತ್ನಿ ಪಾವನ ಉಪಕುಲಪತಿಯಾಗಿ ವಿವಿಯ ಒಡೆತನದ ಪಾರುಪಾತ್ಯ ಸಾಧಿಸಿದ್ದರು.
ಈ ನಡುವೆ ವಿವಿ ಒಡೆತನ ಸಾಧಿಸಲು ಪ್ರಯತ್ನಿಸುತ್ತಿದ್ದ ಸುಧೀರ್ ಅಂಗೂರ್ ತನ್ನ ದಾರಿಗೆ ಅಡ್ಡವಾಗಿದ್ದ ಅಯ್ಯಪ್ಪ ದೊರೆಯ ಕೊಲೆಗೆ ಸಂಚು ರೂಪಿಸಿದ್ದ. ಇದನ್ನು ಅನುಷ್ಠಾನಗೊಳಿಸಲು ಆರ್ ಟಿ ನಗರ ನಿವಾಸಿಯಾಗಿದ್ದ ಸೂರತ್ ಸಿಂಗ್ ಎಂಬಾತನನ್ನು ವಿವಿಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ಅಯ್ಯಪ್ಪ ದೊರೆ ಹಾಗೂ ಮಧುಕರ್ ಅವರ ಚಲನವಲನ ಬಗ್ಗೆ ನಿಗಾವಹಿಸುವಂತೆ ಸೂಚನೆ ನೀಡಿದ್ದ. ಅಲ್ಲದೆ ಸೂರತ್ ಸಿಂಗ್ ಸೇರಿದಂತೆ ಮತ್ತೆ ನಾಲ್ವರಿಗೆ 1 ಕೋಟಿ ರೂ. ಸುಪಾರಿಗೆ ನೀಡಿದ್ದ. ಮುಂಗಡವಾಗಿ 20 ಲಕ್ಷ ರೂ. ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಧುಕರ್ ಅಂಗೂರ್ -ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯೆ ಪ್ರಭಾವಿ ವಕೀಲರ ಕೈವಾಡ ಶಂಕೆ
ಕೊಲೆ ಬಳಿಕ ಆರೋಪಿಗಳು ಪ್ರಭಾವಿ ವಕೀಲ ಕಚೇರಿಗೆ ಹೋಗಿದ್ದಾರೆ. ಅಲ್ಲದೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ವಕೀಲರು ಆರೋಪಿಗಳಿಗೆ ಸಲಹೆ ನೀಡಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಆರೋಪಿ ಸುಧೀರ್ ಸಹೋದರ ಮಧುಕರ್ ಪ್ರತಿಕ್ರಿಯಿಸಿದ್ದು, ಘಟನೆ ಬಗ್ಗೆ ನಿಜಕ್ಕೂ ನನಗೆ ಶಾಕ್ ಆಗಿದೆ. ಇದು ಹಾರಿಬಲ್ ಘಟನೆ ಕೂಡ ಹೌದು. ಅಯ್ಯಪ್ಪ ದೂರೆ ತುಂಬಾ ಒಳ್ಳೆ ವ್ಯಕ್ತಿ. ಹಾರ್ಡ್ ವರ್ಕರ್ ಕೂಡ ಹೌದು. ಓಳ್ಳೆ ಬುದ್ಧಿವಂತ ವ್ಯಕ್ತಿ ಕೂಡ ಹೌದು. ನಾನು ಮತ್ತು ಅಯ್ಯಪ್ಪ ದೊರೆ ಉತ್ತಮ ಸ್ನೇಹಿತರಾಗಿದ್ದೆವು. ಸೂರಜ್ ಬಗ್ಗೆ ನನಗೆ ಗೊತ್ತಿಲ್ಲ. ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಅಂತಾ ಗೊತ್ತು ಅಷ್ಟೇ. ಒಂದು ತಿಂಗಳಿಂದ ಕಾರು ಹಿಂಬಾಲಿಸುತ್ತಿದ್ದರು ಅಂತಾ ಗೊತ್ತಿತ್ತು. ಅದ್ರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಗೊತ್ತಿರಲಿಲ್ಲ. ಈ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.