ಬೆಂಗಳೂರು: ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸುತ್ತಿರುವ ಹಿನ್ನೆಲೆ ಬೆಂಗಳೂರು ನಗರ ಸೇರಿ ವಿವಿಧ ಜಿಲ್ಲೆಗಳು ಮಳೆ ಪರಿಸ್ಥಿತಿ ಎದುರಿಸಲು ಸಜ್ಜಾಗುತ್ತಿವೆ.
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಹವಾಮಾನ ಇಲಾಖೆ ಅಧಿಕಾರಿಗಳ ಜೊತೆ ಕಂದಾಯ ಸಚಿವ ಆರ್.ಅಶೋಕ್ ಅವರು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ಮಳೆ, ಪ್ರವಾಹ ತುರ್ತು ಪರಿಸ್ಥಿತಿ ನಿಭಾಯಿಸಲು 500 ಸಿವಿಲ್ ಡಿಫೆನ್ಸ್ (ಪೌರ ರಕ್ಷಣೆ) ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿದೆ. ಅದರ ಖರ್ಚು ವೆಚ್ಚವನ್ನು ಬಿಬಿಎಂಪಿ ನಿಭಾಯಿಸಲಿದೆ ಎಂದರು.
ವಿಪತ್ತು ನಿರ್ವಹಣಾ ಅಡಿಯಲ್ಲಿ ರಾಜ್ಯಕ್ಕೊಂದು ಗ್ರೂಪ್ ರಚಿಸಿ, ಮಳೆ ಬಂದ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕುವ ಜಿಲ್ಲೆಗೆ ಸಮಸ್ಯೆ ಆಗದಂತೆ ಪರಿಹರಿಸಲು ಸೆಕ್ರೆಟರಿ ಹಾಗೂ ಇಲಾಖಾ ಮುಖ್ಯಸ್ಥರನ್ನು ನೇಮಿಸಿ ಮೇಲುಸ್ತುವಾರಿ ಮಾಡಲಾಗುವುದು. ಪ್ರವಾಹದ ಸಂದರ್ಭದಲ್ಲಿ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸುವ ಬದಲಿಗೆ (ತಾತ್ಕಾಲಿಕ ಶೆಡ್ಗಳ ಬದಲಿಗೆ) ಶಾಶ್ವತವಾಗಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.
ವಿಪತ್ತು ನಿರ್ವಹಣಾ ತಂಡಕ್ಕೆ ₹ 310 ಕೋಟಿ ಮೀಸಲಿಡಲಾಗಿದೆ. ಹತ್ತು , ಹದಿನೈದು ಕೋಟಿ ವೆಚ್ಚದಲ್ಲಿ ಎಲ್ಲ ಸೌಲಭ್ಯಗಳಿರುವ ಪುನರ್ವಸತಿ ಕೇಂದ್ರಗಳನ್ನು ಬೆಂಗಳೂರು, ಮಡಿಕೇರಿ, ಮಂಗಳೂರು ಸೇರಿದಂತೆ ಅಗತ್ಯವಿರುವ ಕಡೆ ನಿರ್ಮಿಸಲಾಗುವುದು ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಪ್ರವಾಹ ಉಂಟಾಗುವ ಸ್ಥಳಗಳು, ಗಾಳಿಯ ವೇಗ, ಯಾವ ಪ್ರದೇಶದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂಬ ವರದಿಯನ್ನು ಕರ್ನಾಟಕ ವಿಪತ್ತು ನಿರ್ವಹಣಾ ಇಲಾಖೆಯಿಂದ ನಿತ್ಯ ತರಿಸಿಕೊಳ್ಳಲಾಗುತ್ತದೆ. 210 ಪ್ರವಾಹ ಸೂಕ್ಷ್ಮ ಪ್ರದೇಶಗಳಿವೆ. 21 ಸ್ಥಳಗಳಲ್ಲಿ ರಾಜಕಾಲುವೆಗಳಿಗೆ ಸೆನ್ಸಾರ್ ಅಳವಡಿಸಲಾಗಿದೆ. ಅದು ಶೇ.75 ನೀರು ತುಂಬಿದಾಗ ಸೂಚನೆ (ಅಲರಾಂ ವ್ಯವಸ್ಥೆ ಮಾಡಲಾಗಿದೆ) ನೀಡಲಿದೆ. ಆಗ ಪ್ರವಾಹ ಪರಿಸ್ಥಿತಿ ತಡೆಯಲು ಸಾಧ್ಯವಾಗುವುದು ಎಂದರು.
ಮರ ಬಿದ್ದ ಕೂಡಲೇ ಪೊಲೀಸರು ಬ್ಯಾರಿಕೇಡ್ ಹಾಕಬೇಕು. ಎಲೆಕ್ಟ್ರಿಕ್ ಲೈನ್ ತುಳಿಯದ ಹಾಗೆ ಎಚ್ಚರವಹಿಸಲು ಬ್ಯಾರಿಕೇಡ್ ಹಾಕಬೇಕು. ರಾತ್ರಿ ವೇಳೆಯಲ್ಲಿ ಬಿದ್ದ ಮರ ತುಂಡು ಮಾಡಿ ತೆಗೆಯಲು ಜನರೇಟರ್ ಲೈಟ್ ಹಾಕಿ ಅಳವಡಿಸಲಾಗುವುದು. ಮ್ಯಾನ್ಹೋಲ್ಗಳನ್ನು ಮುಚ್ಚುವಂತೆ ಜಲಮಂಡಳಿಗೆ ತಿಳಿಸಲಾಗಿದೆ ಎಂದರು.
ರಾಜ್ಯ ಅಗ್ನಿಶಾಮಕ ಇಲಾಖೆ ನಿರ್ದೇಶಕ ಶಿವಕುಮಾರ್ ಮಾತನಾಡಿ, ಮರ ಬಿದ್ದಾಗ ಕಟ್ ಮಾಡಿ ತೆರವು ಮಾಡಲು ಸಲಕರಣೆಗಳು, ಲೈಟ್ ವ್ಯವಸ್ಥೆ, ಬೋಟ್ ವಿಥ್ ಒಬಿಎಮ್ ಇವೆ. ಡಿ-ವಾಟರಿಂಗ್, ನೀರು ತೆಗೆಯುವ ಪಂಪ್ಗಳಿವೆ. ಆರು ಸಾವಿರ ಲೀಟರ್ ನೀರನ್ನು ಒಂದು ನಿಮಿಷಕ್ಕೆ ತೆಗೆಯಬಹುದು. ರಕ್ಷಣಾ ವಾಹನಗಳಿವೆ. ಎಂಟು ವಲಯಗಳಿಗೆ ಅಗ್ನಿಶಾಮಕ ಇಲಾಖೆಯ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.