ಬೆಂಗಳೂರು :ಮುಂದಿನ ಗಣರಾಜ್ಯೋತ್ಸವ ದಿನದಂದು ಪಹಣಿಯನ್ನು ಉಚಿತವಾಗಿ ಮಾಡಿ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಜೊತೆಗಿನ ಸಭೆ ಬಳಿಕ ಮಾತನಾಡಿದ ಅವರು, ಜನವರಿ 26ರಂದು ಕಂದಾಯ ಇಲಾಖೆಯಿಂದ ಹಲವು ಯೋಜನೆಗಳನ್ನ ಲೋಕಾರ್ಪಣೆ ಮಾಡಲಿದ್ದೇವೆ. ಆ ಪೈಕಿ ಪಹಣಿಯನ್ನು ಹಣ ಪಡೆಯದೇ ಮಾಡಿ ಕೊಡುವ ಯೋಜನೆ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಒಂದೇ ದಿನದಲ್ಲಿ ಪಹಣಿ ಕೊಡುವ ಕೆಲಸ ಮಾಡಲಿದ್ದೇವೆ. 45 ಲಕ್ಷ ರೈತರ ಮನೆ ಬಾಗಿಲಿಗೆ ಜಮೀನುಗಳ ದಾಖಲೆ ತಲುಪಿಸುತ್ತೇವೆ. ಸಿಎಂ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆರ್. ಅಶೋಕ್ ತಿಳಿಸಿದರು.
504 ಕೋಟಿ ರೂಪಾಯಿ ಎನ್ಡಿಆರ್ಎಫ್ ಅಡಿ ರಾಜ್ಯಕ್ಕೆ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುವೆ. ಇನ್ಪುಟ್ ಸಬ್ಸಿಡಿಗೆ 1061.84 ಕೋಟಿ ರೂಪಾಯಿ ನೀಡಲಾಗಿದೆ. ಇದರಿಂದ 14 ಲಕ್ಷ ರೈತರಿಗೆ ನೆರವು ಸಿಕ್ಕಿದೆ ಎಂದರು.
ಇದಲ್ಲದೇ, 960 ಕೋಟಿ ರೂ. ಹಣ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದೆ. ಶೀಘ್ರವೇ ಜನರ ನೆರವಿಗೆ ಧಾವಿಸಲು ಸೂಚನೆ ನೀಡಲಾಗಿದೆ. ಬೆಂಗಳೂರಿಗೆ ಅಲೆಯುವ ಸಂದರ್ಭ ಬಾರದಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. ಜನರ ಸಮಸ್ಯೆ ಜಿಲ್ಲಾ ಹಂತದಲ್ಲೇ ಬಗೆಹರಿಸಲು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ:ನೆರೆ ಪರಿಹಾರ ವಿತರಣೆ ವಿಳಂಬಕ್ಕೆ ಸಚಿವ ಕಾರಜೋಳ ಆಕ್ಷೇಪ.. ಶೀಘ್ರ ಕ್ರಮಕೈಗೊಳ್ಳುವಂತೆ ಸಿಎಂ ಸೂಚನೆ