ಐಐಟಿ ಹೆಸರಲ್ಲಿ ನಕಲಿ ಅಂಕಪಟ್ಟಿ ಸಲ್ಲಿಕೆ: ಎಂಜಿನಿಯರ್ ವಿರುದ್ಧ ಎಫ್ಐಆರ್
ಸರ್ಕಾರಿ ನೌಕರಿಗಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಯುವಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು: ಐಐಟಿ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿ ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ (ಸಿ.ಪಿ.ಆರ್.ಐ) ಯಲ್ಲಿ ಉದ್ಯೋಗ ಪಡೆದಿದ್ದ ಎಂಜಿನಿಯರ್ನೊಬ್ಬ ಸಿಂಧುತ್ವ ಪರೀಕ್ಷೆ ವೇಳೆ ಸಿಕ್ಕಿಬಿದ್ದಿದ್ದಾನೆ. ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪದಡಿ ನ್ಯೂ ಬಿಇಎಲ್ ರಸ್ತೆಯ ನಿವಾಸಿ ಮನೀಶ್ ಸಿಂಗ್ (26) ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
2018ನೇ ಸಾಲಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಎಂಜಿನಿಯರ್ ಹುದ್ದೆಗೆ ಮನೀಶ್ ಸಿಂಗ್ ನೇಮಕಗೊಂಡಿದ್ದ. ನೇಮಕಾತಿ ವೇಳೆ ಮನೀಶ್ ಸಲ್ಲಿಸಿದ್ದ ಐಐಟಿ ಅಂಕಪಟ್ಟಿ ಸಿಂಧುತ್ವ ಪರಿಶೀಲನೆಗಾಗಿ ಅಸ್ಸಾಂನ ಗುವಾಹಟಿ ಐಐಟಿಗೆ ಕಳುಹಿಸಲಾಗಿತ್ತು. ಅಂಕಪಟ್ಟಿ ಪರಿಶೀಲನೆ ನಡೆಸಿದ ಐಐಟಿ ಅಧಿಕಾರಿಗಳು, ನಕಲಿ ಎಂದು ದೃಢಪಡಿಸಿದ್ದಾರೆ. ಡಿಜಿಟಲ್ ಬೆರಳಚ್ಚು ಬೇರೊಬ್ಬ ಅಭ್ಯರ್ಥಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಿ.ವಿ.ರಾಮನ್ ನಗರದ ಸಿ.ಪಿ.ಆರ್.ಐ ಆಡಳಿತಾಧಿಕಾರಿ ಕೆ.ಪ್ರವೀಣ್ ಕುಮಾರ್ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸರ್ಕಾರಿ ನೌಕರಿ ಸಲುವಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ ಮನೀಷ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ದೂರಿನ ಅನ್ವಯ ಆರೋಪಿ ವಿರುದ್ಧ ಎಫ್.ಐ.ಆರ್ ದಾಖಲಿಸಿ ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.