ಬೆಂಗಳೂರು :ಆನ್ಲೈನ್ ಪರೀಕ್ಷೆ ವೇಳೆ ಅಕ್ರಮ ಎಸಗಿದ ಆರೋಪಕ್ಕೆ ಸಿಲುಕಿ ವಜಾಗೊಂಡಿದ್ದ ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯ (ಐಐಎಂ-ಬಿ) 6 ವಿದ್ಯಾರ್ಥಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
ವಿದ್ಯಾರ್ಥಿಗಳನ್ನು ವಜಾಗೊಳಿಸಿದ್ದ ಐಐಎಂಬಿ ಆದೇಶವನ್ನು ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಎತ್ತಿ ಹಿಡಿದಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ಧ ವಿಭಾಗೀಯ ಪೀಠ, ವಿದ್ಯಾರ್ಥಿಗಳಿಗೆ ತಮ್ಮ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.
ವಿದ್ಯಾರ್ಥಿಗಳನ್ನು ವಜಾಗೊಳಿಸಿದ ಕ್ರಮ ರದ್ದುಪಡಿಸಿದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಐಐಎಂಬಿ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಜಾಗೊಳಿಸಿರುವ ವಿಭಾಗೀಯ ಪೀಠ, ವಿದ್ಯಾರ್ಥಿಗಳು ಪರೀಕ್ಷೆ ವೇಳೆ ಅಕ್ರಮ ಎಸಗಿ ತಪ್ಪು ಮಾಡಿರಬಹುದು. ಆದರೆ, ಅವರನ್ನು ವಜಾಗೊಳಿಸಿರುವ ಕ್ರಮ ಸರಿಯಲ್ಲ. ಅವರಿಗೆ ಮೃದುವಾದ ಶಿಕ್ಷೆ ನೀಡುವ ಮೂಲಕ ತಿದ್ದಿಕೊಳ್ಳಲು ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ.
ಶೂನ್ಯ ಅಂಕ ನೀಡಿ ಮೃದು ಶಿಕ್ಷೆ: ಅಲ್ಲದೇ, ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಯಲ್ಲಿ ಕಲಿಯುತ್ತಿದ್ದು, ಅವರ ಅಹವಾಲು ಆಲಿಸದೆ ಏಕಾಏಕಿ ಅವರನ್ನು ಉಚ್ಛಾಟಿಸಿರುವುದು ಸರಿಯಲ್ಲ. ಹೀಗಾಗಿ, ಪರೀಕ್ಷಾ ಅಕ್ರಮ ಎಸಗಿದ ವರ್ಷದ ಸೆಮಿಸ್ಟರ್‌ನಲ್ಲಿ ಶೂನ್ಯ ಅಂಕ ನೀಡಿ ಮೃದು ಶಿಕ್ಷೆ ವಿಧಿಸಬಹುದು ಎಂದಿದೆ. ಹಾಗೆಯೇ, ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳ ವಿರುದ್ಧ ಸಂಸ್ಥೆ ಕ್ರಮ ಕೈಗೊಳ್ಳಲು ಐಐಎಂಬಿ ಸ್ವತಂತ್ರವಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸರ್ಕಾರಿ ಶಾಲೆಗಳಲ್ಲಿ ನಿಗದಿಪಡಿಸಿದ ಸಮವಸ್ತ್ರ ಬಳಕೆ ಕಡ್ಡಾಯಗೊಳಿಸಿ ಸರ್ಕಾರದ ಖಡಕ್ ಆದೇಶ
ಪ್ರಕರಣದ ಹಿನ್ನೆಲೆ :2021ರ ಆಗಸ್ಟ್‌ನಲ್ಲಿ ಐಐಎಂಬಿಯಲ್ಲಿ ಸ್ನಾತಕೋತ್ತರ ಕೋರ್ಸ್ ಕಲಿಯುತ್ತಿರುವ 15 ವಿದ್ಯಾರ್ಥಿಗಳು ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ವಿಷಯದ ಆನ್ಲೈನ್ ಪರೀಕ್ಷೆ ವೇಳೆ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಸಂಸ್ಥೆ ವಿಚಾರಣೆ ನಡೆಸಿದಾಗ ಮೊದಲಿಗೆ ನಿರಾಕರಿಸಿದ್ದ ವಿದ್ಯಾರ್ಥಿಗಳು, ಸಾಕ್ಷ್ಯ ಸಿಕ್ಕಾಗ ತಪ್ಪೊಪ್ಪಿಕೊಂಡು ಕ್ಷಮೆ ಕೋರಿದ್ದರು. ನಂತರವೂ, ಪರೀಕ್ಷಾ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದ ಐಐಎಂಬಿ, 9 ವಿದ್ಯಾರ್ಥಿಗಳನ್ನು ಉಚ್ಛಾಟಿಸಿತ್ತು.
ಈ ಆದೇಶ ರದ್ದು ಕೋರಿದ್ದ ವಿದ್ಯಾರ್ಥಿಗಳ ಅರ್ಜಿ ಪುರಸ್ಕರಿಸಿದ್ದ ಏಕಸದಸ್ಯ ಪೀಠ, ವಿದ್ಯಾರ್ಥಿಗಳಿಗೆ ಮೃದು ಶಿಕ್ಷೆ ನೀಡಲು ಸೂಚಿಸಿ, ಉಚ್ಛಾಟನೆ ಆದೇಶ ರದ್ದು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಐಐಎಂಬಿ ಮೇಲ್ಮನವಿ ಸಲ್ಲಿಸಿತ್ತು.