ಆನೇಕಲ್: ಆನೇಕಲ್ ಸುತ್ತ ಹಾಗು ತಮಿಳುನಾಡಿನ ಕಾಂಡಂಚಿನ ಗ್ರಾಮಗಳ ಆಜುಬಾಜು, ಕಳೆದ ವರ್ಷ ಏಳೆಂಟು ಜನರ ಸಾವಿಗೆ ಕಾರಣವಾಗಿದ್ದ ಆನೆಗಳು ಎರಡನೇ ಪಾಳಯದಲ್ಲಿ ಮತ್ತೆ ಜನವಸತಿ ಜಾಗಗಳಿಗೆ ದಾಂಗುಡಿಯಿಟ್ಟಿವೆ.
ಗಡಿ ಭಾಗದಲ್ಲಿ ತಮಿಳುನಾಡಿನ ಅರಣ್ಯಾಧಿಕಾರಿಗಳು ಎಷ್ಟೇ ತಿಣಕಾಡಿ ಜಪ್ಪಯ್ಯ ಅಂದ್ರೂ ಆನೆಯನ್ನು ಕಾಡಿನತ್ತ ಕದಲಿಸಲಾಗುತ್ತಿಲ್ಲ. ಹಳ್ಳಿಗಳತ್ತ ಆನೆ ಬರುತ್ತಿರುವುದು ಅರಣ್ಯಾಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಡ್ತಿವೆ. ಆನೆಗಳಿಗೆ ರಾಜ್ಯದ ಗಡಿ ಗೊತ್ತಿಲ್ಲವಾದರೂ ತಾವು ಸರಾಗವಾಗಿ ತಿರುಗಾಡುವ ಜಾಡನ್ನು ಹಿಡಿದು ಸದಾ ಬೇಟಿ ನೀಡ್ತಿವೆ.
ಬನ್ನೇರುಘಟ್ಟ ಅರಣ್ಯದಿಂದಲೇ ಸುಮಾರು ಎಂಬತ್ತಕ್ಕೂ ಹೆಚ್ಚು ಕಾಡಾನೆ ತಮಿಳುನಾಡಿನ ಗ್ರಾಮಗಳತ್ತ ನುಗ್ಗಿ ಬರುವ ಮೂನ್ಸೂಚನೆ ಇದ್ದು ಇದರಿಂದಾಗಿ ಗಡಿ ಭಾಗದ ರೈತರಲ್ಲಿ ಆತಂಕ ಮನೆಮಾಡಿದೆ.
ಗಡಿಯಾಚೆಗೆ ಹೆಜ್ಜೆ ಹಾಕಿದ ಗಜ ಪಡೆ ಸದ್ಯ ರಾಗಿ ಕಟಾವಿನ ಕಾಲ, ರೈತರು ವರ್ಷದ ರಾಗಿ ಕಟಾವು ಮಾಡಿ ಫಸಲು ಮನೆಗೆ ತುಂಬಿಕೊಳ್ಳುವ ಹರುಷದಲ್ಲಿದ್ರೆ ಆನೆಗಳು ಹೊಲ ತೋಟಕ್ಕೆ ನುಗ್ಗಿ, ರಾಗಿ, ಬಾಳೆ, ತರಕಾರಿಗಳನ್ನು ಮೇಯ್ದು ಹೊಸಕಿಹಾಕಲು ಗಜರಾಜನಿಗೆ ನಿಮಿಷವಷ್ಟೇ ತಗುಲುತ್ತಿದೆ. ಅರಣ್ಯಾಧಿಕಾರಿಗಳ ಪಟಾಕಿ ಸದ್ದು, ಬಂದೂಕು ಸದ್ದಿಗೂ ಕ್ಯಾರೆ ಎನ್ನದ ಮದಗಜಗಳು ಜನರನ್ನ ಕಂಗೆಡಿಸಿವೆ.