ಬೆಂಗಳೂರು:ಬಿಬಿಎಂಪಿಯ ಸಾರ್ವತ್ರಿಕ ಚುನಾವಣೆ ನಡೆಸಲು, ಮತದಾರರ ಪಟ್ಟಿ ಹಾಗೂ ಪೂರ್ವ ಸಿದ್ಧತೆ ಕುರಿತು ರಾಜ್ಯ ಚುನಾವಣಾ ಆಯೋಗದ ಸಭೆ ನಡೆಯಿತು.
ರಾಜ್ಯ ಚುನಾವಣೆ ಆಯೋಗದ ಆಯುಕ್ತರು, ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿಗಳು, ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಸಭೆಯಲ್ಲಿ ಭಾಗಿಯಾಗಿದ್ದರು. ಮತದಾರರ ಪಟ್ಟಿ ಸಿದ್ಧಪಡಿಸುವಾಗ ಹೊಸದಾಗಿ ವಾರ್ಡ್ ಪುನರ್ವಿಂಗಡಣೆಗೆ ಅನುಗುಣವಾಗಿ ಪಟ್ಟಿ ಸಿದ್ಧಪಡಿಸಬೇಕು. ಈಗಾಗಲೇ ಈ ಬಗ್ಗೆ ಸಿಬ್ಬಂದಿಗೆ ಅಗಸ್ಟ್ 21 ರಂದು ತರಬೇತಿ ನೀಡಲಾಗಿದೆ. ವಾರ್ಡ್ ವಿಂಗಡಣೆಯಂತೆ ಪ್ರತಿ ವಾರ್ಡಿನ ಗಡಿ ಸರಹದ್ದಿನಲ್ಲಿರುವ ಮತದಾರರನ್ನು ಗುರುತಿಸಿ, ಯಾವುದೇ ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ವಾರ್ಡಿನ ಮತದಾರರ ಪಟ್ಟಿಯಲ್ಲಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಆಯಾ ವಾರ್ಡಿನ ಮತದಾರರು ಆಯಾ ವಾರ್ಡಿನಲ್ಲೇ ಇರುವಂತೆ ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಹಾಗೂ ಆಯೋಗ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಆಯೋಗದ ಆಯುಕ್ತರು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚಿಸಿದ್ದಾರೆ.