ಬೆಂಗಳೂರು :ನಿಷೇಧಿತ ಕಳೆ ನಾಶಕ ಗ್ಲೈಕೋ ಫಾಸ್ಫೇಟ್ ಬಳಕೆ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಬುಧವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ವಿಷಯ ಪ್ರಸ್ತಾಪಿಸಿ ಹಲವು ರಾಜ್ಯಗಳಲ್ಲಿ ನಿರ್ಬಂಧ ಹೇರಿರುವ ಗ್ಲೈಕೋಫಾಸ್ಪೆಟ್ ಕಳೆ ನಾಶಕವನ್ನು ರೈತರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಎರೆಹುಳು ಸೇರಿದಂತೆ ಜೀವವೈವಿಧ್ಯ ನಾಶವಾಗುತ್ತದೆ ಎಂದರು.
ಅಲ್ಲದೇ, ನಿಷೇಧಿತ ಕಳೆ ನಾಶಕದಿಂದ ಜಲಮೂಲ ವಿಷವಾಗುತ್ತದೆ. ಮನುಷ್ಯರು, ಪ್ರಾಣಿಗಳಿಗೂ ಹಾನಿಕಾರಕವಾಗಿದೆ. ಕೃಷಿ ಇಲಾಖೆ ಬದುಕಿದೆಯೋ ಇಲ್ಲವೋ ಎಂದು ಪ್ರಶ್ನಿಸಿದರು. ಈ ವೇಳೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಉತ್ತರಿಸಿ, ಕಳೆ ಕೀಳಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಹಾಗಾಗಿ, ಕಳೆ ಔಷಧ ಸಿಂಪಡಿಸುವ ಕೆಲಸ ಆಗುತ್ತಿದೆ. ಇದರಲ್ಲಿ ಯಾವುದೇ ತೊಂದರೆಯಾಗಿರುವ ದೂರುಗಳು ರೈತರಿಂದ ಬಂದಿಲ್ಲ ಎಂದರು.