ಕರ್ನಾಟಕ

karnataka

ETV Bharat / city

ಪ್ರತಿಭಟನಾನಿರತ ಗುತ್ತಿಗೆ ಸಿಬ್ಬಂದಿ ಬೇಡಿಕೆ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಡಾ. ಸುಧಾಕರ್

ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುತ್ತಿಗೆ ಸಿಬ್ಬಂದಿ ಪ್ರತಿಭಟನೆ- ಆರ್ಥಿಕ ಇಲಾಖೆ ಜೊತೆ ಮಾತನಾಡಿ ಮುಂದಿನ ಕ್ರಮ- ಸಚಿವ ಡಾ. ಸುಧಾಕರ್

Health Minister Dr. K. Sudhakar
ಆರೋಗ್ಯ ಸಚಿವ ಡಾ. ಕೆ.ಸುಧಾಕರ್​

By

Published : Jul 7, 2022, 3:33 PM IST

Updated : Jul 7, 2022, 3:53 PM IST

ಬೆಂಗಳೂರು: ಎನ್​ಹೆಚ್​ಎಂ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭಟನಾನಿರತ ಗುತ್ತಿಗೆ ಸಿಬ್ಬಂದಿ ಬೇಡಿಕೆ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯ ಹೊರ ಗುತ್ತಿಗೆ ನೌಕರರು ಹಾಗೂ ಎನ್​ಹೆಚ್​ಎಂ ಅಡಿಯಲ್ಲಿ ಸೇವೆಯಲ್ಲಿರುವ ಗುತ್ತಿಗೆ ಸಿಬ್ಬಂದಿ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಅನುದಾನದ ಅಡಿ ನಡೆಯುವ ಕಾರ್ಯಕ್ರಮ ಆಗಿರುವುದರಿಂದ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಆರೋಗ್ಯ ಇಲಾಖೆಯಲ್ಲಿ 21 ಸಾವಿರ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ವಿಷಯದ ವಿಚಾರವಾಗಿ ಕೆಲವು ಸಿಬ್ಬಂದಿ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಫ್ರೀಡಂ ಪಾರ್ಕ್​ನಲ್ಲಿ ಕುಳಿತಿದ್ದಾರೆ. ಪ್ರತಿ ಸಿಬ್ಬಂದಿ ಮೇಲೆ ಕೂಡಾ ಸರ್ಕಾರಕ್ಕೆ ಗೌರವ ಇದೆ. ಕೋವಿಡ್ ಸಂದರ್ಭದಲ್ಲಿ ಕೂಡಾ ಎಲ್ಲಾ ತ್ಯಾಗ ಮನೋಭಾವದಿಂದ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಆರೋಗ್ಯ ಸಚಿವ ಡಾ. ಕೆ.ಸುಧಾಕರ್​ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಹಂತದಲ್ಲಿ ಏನೆಲ್ಲಾ ಸಾಧ್ಯತೆಗಳಿವೆಯೋ ಅವುಗಳ ಬಗ್ಗೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಇನ್ನೂ ಕೆಲವು ಬೇಡಿಕೆಗಳ ಬಗ್ಗೆ ಆರ್ಥಿಕ ಇಲಾಖೆ ಜೊತೆ ಮಾತನಾಡಬೇಕಿದೆ. ನಾನು ಫ್ರೀಡಂ ಪಾರ್ಕ್ ಬಳಿ ಹೋಗಿ ಅವರ ಜೊತೆ ಚರ್ಚೆ ಮಾಡುತ್ತೇನೆ. ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಣೆ, ಎಷ್ಟು ಕಾಲದಿಂದ ಕಾರ್ಯ ನಿರ್ವಹಣೆ ಮಾಡ್ತಿದಾರೆ ಈ ಎಲ್ಲದರ ಬಗ್ಗೆಯೂ ಚರ್ಚೆ ಮಾಡುವೆ ಎಂದರು.

ವೈಯಕ್ತಿಕ ತೇಜೋವಧೆ ಮಾಡಬಾರದು :ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಗೃಹ ಸಚಿವರಾಗಿದ್ದವರು, ಮುಖ್ಯಮಂತ್ರಿಯೂ ಆಗಿದ್ದರು. ಇಷ್ಟು ವೇಗವಾಗಿ ತನಿಖೆ ನಡೆಯುತ್ತಿದೆ. ಎಡಿಜಿಪಿ ಅಂತಹ ಅಧಿಕಾರಿ ಬಂಧನ ಆಗಿದೆ. ಹಿಂದೆ ಎಲ್ಲಾದರೂ ಆಗಿದೆಯಾ.? ಬೇರೆ ಯಾವ ರಾಜ್ಯದಲ್ಲಾದರೂ ಆಗಿದೆಯಾ ಹೇಳಿ? ಹಿಂದಿನ ಸರ್ಕಾರದಲ್ಲಿ ಸಮಿತಿ ಮಾಡಿದರೂ ಯಾರನ್ನೂ ಬಂಧಿಸಲಿಲ್ಲ. ಅದು ಬಿಟ್ಟು ಈ ರೀತಿ ಹೇಳಿಕೆ ನೀಡಿ ವೈಯಕ್ತಿಕ ತೇಜೋವಧೆ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.

ಅನೇಕರ ಮೇಲೆ ಆರೋಪ ಬಂದಿರೋದನ್ನು ಹಲವರು ಹೇಳಿದ್ರು. ಹಾಗಂತ ನೇರವಾಗಿ ಅವರ ಮೇಲೆ ಹೇಳಲಾಗುತ್ತಾ.?. ಎಲ್ಲದಕ್ಕೂ ಸಾಕ್ಷಿ ಬೇಕಿದೆ. ಈ ಪ್ರಕರಣದಲ್ಲಿ ಬಂಧನ ಆಗಿದೆ. ಅದನ್ನು ಸಿದ್ದರಾಮಯ್ಯ ಅವರು ಪ್ರಶಂಸಿಬೇಕು. ಸಿದ್ದರಾಮಯ್ಯ ಹಾಗೂ ಡಿಕೆಶಿ ಹೇಳಿದ ಮಾತ್ರಕ್ಕೆ ಯಾರೂ ಅಪರಾಧಿಗಳು ಆಗಲ್ಲ. ಏನು ದಾಖಲೆ ಇದೆಯೋ ಅದನ್ನು ಕೊಡಲಿ. ಅವರ ಗುರುತರ ಆಪಾದನೆ ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಸಾಕ್ಷಿ ಇಲ್ಲದೆ ಮಾತನಾಡಬಾರದು. ಅದು ಸಿದ್ದರಾಮಯ್ಯ ಅವರ ವೈಯಕ್ತಿಕ ಜೀವನಕ್ಕೂ ಶೋಭೆ ತರೋದಿಲ್ಲ. ನಾನು ಒಕ್ಕಲಿಗ, ಹಾಗಂದ ಮಾತ್ರಕ್ಕೆ ಒಕ್ಕಲಿಗ ಅಭ್ಯರ್ಥಿಗಳೆಲ್ಲ ನನ್ನ ಸಂಬಂಧಿಕರಾಗುತ್ತಾರಾ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ.. ಗುತ್ತಿಗೆ ವೈದ್ಯಕೀಯ ಸಿಬ್ಬಂದಿಯಿಂದ ಬೆಂಗಳೂರು ಚಲೋ

Last Updated : Jul 7, 2022, 3:53 PM IST

ABOUT THE AUTHOR

...view details