ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿರುವ ನಿಮ್ಮವರ ಕಾಳಜಿಗೆ ನಾವಿದ್ದೇವೆ: 'ನಾವಿಕ'ರಿಗೆ ಡಿಸಿಎಂ ಅಭಯ

ಅಮೆರಿಕದ ಕನ್ನಡ ಒಕ್ಕೂಟವಾದ ನಾವಿಕ ಸಂಘಟನೆ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್​ನಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಕೊರೊನಾ ವಿರೋಧಿ ಹೋರಾಟಕ್ಕೆ ನೆರವಾಗುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

dcm ashwath narayan
ಡಿಸಿಎಂ ಅಶ್ವತ್ಥನಾರಾಯಣ

By

Published : May 31, 2020, 2:00 PM IST

ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿ ನಿಮ್ಮವರ ರಕ್ಷಣೆಗೆ ನಮ್ಮ ಸರ್ಕಾರ ಇದೆ. ಈ ಬಗ್ಗೆ ಯಾವುದೇ ಆತಂಕ ಬೇಡ. ಉತ್ತಮ ಆರೋಗ್ಯ ಸೇವೆ ನಮ್ಮಲ್ಲಿದೆ ಎಂದು ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗರಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಭರವಸೆ ನೀಡಿದ್ದಾರೆ.

ಅಮೆರಿಕದ ಕನ್ನಡ ಒಕ್ಕೂಟ 'ನಾವು ವಿಶ್ವ ಕನ್ನಡಿಗರು' (ನಾವಿಕ) ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್​​ನಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಅಶ್ವತ್ಥ ನಾರಾಯಣ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾವಿಕದ ಬಂಧುಗಳು ನೀಡಿರುವ 10 ಲಕ್ಷ ರೂ. ದೇಣಿಗೆಗೆ ಸರ್ಕಾರದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಡಿಸಿಎಂ ಅಶ್ವತ್ಥನಾರಾಯಣ

"ಕೊರೊನಾ, ಲಾಕ್‌ಡೌನ್‌, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮವರಿಗೆ ಧೈರ್ಯ ಹೇಳಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವ ನಾವಿಕ ಬಳಗಕ್ಕೆ ಅಭಿನಂದನೆ. ವಿಡಿಯೋ ಕಾನ್ಫರೆನ್ಸ್​​ ಮೂಲಕ 'ನಾವಿಕ' ಅಮೆರಿಕನ್ನಡಿಗರ ಕೈ ಹಿಡಿಯುತ್ತಿದೆ. ಪರಿಣಿತರಿಂದ ಕೊರೊನಾ ಮಾಹಿತಿ, ಮುನ್ನೆಚ್ಚರಿಕಾ ಸಲಹೆಗಳನ್ನು ನೀಡುತ್ತಿರುವುದು ಒಳ್ಳೆಯ ಕೆಲಸ. ಕೊರೊನಾ ದೀರ್ಘಕಾಲ ನಮ್ಮೊಂದಿಗೆ ಇರುವುದರಿಂದ ಆರೋಗ್ಯ, ಆರ್ಥಿಕ ಸಮಸ್ಯೆ ಎದುರಿಸಲು ಪರಸ್ಪರ ಸಹಕಾರ ಬಹಳ ಮುಖ್ಯ. ಇಂತಹ ಸನ್ನಿವೇಶದಲ್ಲಿ ನಮ್ಮ ಬೆಂಬಲ ಸದಾ ಇರುತ್ತದೆ. ಇಲ್ಲಿರುವ ನಿಮ್ಮ ಆಪ್ತರ ರಕ್ಷಣೆ ನಮ್ಮ ಜವಾಬ್ದಾರಿ" ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆಯ ಮಾತುಗಳನ್ನಾಡಿದರು.

"ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಮೂಲಸೌಕರ್ಯದ ಕೊರತೆಯನ್ನು ಹಿಮ್ಮೆಟ್ಟಿ ಇಡೀ ವಿಶ್ವದ ಗಮನ ಸೆಳೆದಿರುವ ಭಾರತ, ಇಂದು ಇತರ ರಾಷ್ಟ್ರಗಳಿಗೆ ಪ್ರೇರಣೆ ನೀಡುವಂತಾಗಿದೆ. ನಿಮ್ಮ ಜನ್ಮಭೂಮಿ ಬಗ್ಗೆ ಹೆಮ್ಮೆ ಪಡುವಂತ ಕೆಲಸ ಆಗುತ್ತಿದೆ" ಎಂದು ಈ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ಮೂಲಸೌಕರ್ಯ ಸುಧಾರಣೆ:

"ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ವೈರಾಣು ಪತ್ತೆ ಪ್ರಯೋಗಾಲಯದ ಸಂಖ್ಯೆ 3 ತಿಂಗಳ ಅವಧಿಯಲ್ಲಿ 2ರಿಂದ 60ಕ್ಕೆ ಹೆಚ್ಚಿಸಲಾಗಿದೆ. ಪಿಪಿಇ ಕಿಟ್‌, ಎನ್‌ 95 ಮಾಸ್ಕ್‌, ವೆಂಟಿಲೇಟರ್‌ಗಳ ತಯಾರಿಕೆಯಲ್ಲಿ ಸ್ವಾಲಂಬನೆ ಸಾಧಿಸಿ, ಬೇರೆ ದೇಶಗಳಿಗೆ ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ತಂತ್ರಜ್ಞಾನ ಬಳಸಿಕೊಂಡು ಆರೋಗ್ಯ ಸಿಬ್ಬಂದಿ ಕೊರತೆ ನೀಗಿಸಲಾಗಿದೆ. ಟೆಲಿಮೆಡಿಸನ್‌, ಟೆಲಿಕನ್ಸಲ್ಟೇಷನ್‌ ಮೂಲಕ ವೈದ್ಯಕೀಯ ಸಲಹೆ ನೀಡಲಾಗುತ್ತಿದೆ. ರಿಮೋಟ್‌ ಐಸಿಯು ವ್ಯವಸ್ಥೆ ಇದೆ. ಜತೆಗೆ ಹೊಸ ಟೆಸ್ಟಿಂಗ್ ವಿಧಾನ, ಹೊಸ ಉಪಕರಣಗಳ ಸಂಶೋಧನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ"

"ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ. ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದೆ. ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಆರೋಗ್ಯ ಸಮೀಕ್ಷೆ ನಡೆಸಿ ಆ ಮಾಹಿತಿಯನ್ನು ಡಿಜಿಟಲೈಸ್‌ ಮಾಡಲಾಗಿದೆ. ಜತೆಗೆ ಆಸ್ಪತ್ರೆಯಲ್ಲಿರುವ ಮೂಲಸೌಕರ್ಯ, ಸಿಬ್ಬಂದಿ, ಔಷಧ, ವೈದ್ಯಕೀಯ ಪರಿಕರಗಳ ದತ್ತಾಂಶದ ಡ್ಯಾಶ್‌ಬೋರ್ಡ್‌ ಇದ್ದು, ರಿಯಲ್‌ ಟೈಮ್‌ ಮಾಹಿತಿ ಲಭ್ಯವಾಗುತ್ತಿದೆ. ಮನೆ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ ಬಗ್ಗೆ ಮಾಹಿತಿ ಇರುತ್ತದೆ. ಈ ಎಲ್ಲಾ ವಿಷಯಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಯಾವುದೇ ಕೊರತೆ, ಸಮಸ್ಯೆ ಉಂಟಾಗದಂತೆ ಶ್ರಮಿಸುತ್ತಿದ್ದಾರೆ"ಎಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ವೈದ್ಯರ ಬಗ್ಗೆ ಹೆಮ್ಮೆ:

"ವಿಶ್ವದ ಯಾವುದೇ ಭಾಗದಲ್ಲಿದ್ದರೂ ನಮ್ಮವರ ಕಷ್ಟಕ್ಕೆ ಸ್ಪಂದಿಸುವ ಔದಾರ್ಯ ನಮ್ಮ ಕನ್ನಡಿಗರಿಗಿದೆ. ಕೊರೊನಾ ಸಂದರ್ಭದಲ್ಲಿ ಇಡೀ ವಿಶ್ವ ತತ್ತರಿಸಿಹೋಗಿದೆ. ಇಂಥ ಸಂದರ್ಭದಲ್ಲಿ ಅಮೆರಿಕದಲ್ಲಿರುವ ನಮ್ಮ ದೇಶ ಅದರಲ್ಲೂ ವಿಶೇಷವಾಗಿ ಕರ್ನಾಟಕ ಮೂಲದ ವೈದ್ಯರು ಅಪ್ರತಿಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜತೆ ಮಾತನಾಡಿ ಅವರಿಂದ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ನಮ್ಮ ದೇಶದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ವೈದ್ಯರಿಗೆ ಅಮೆರಿಕದಲ್ಲಿ ಅಪಾರ ಗೌರವ, ಮನ್ನಣೆ ದೊರೆತಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆ ವಿಷಯ" ಎಂದು ಡಿಸಿಎಂ ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details