ಬೆಂಗಳೂರು : ನಗರದ ದಾಸರಹಳ್ಳಿ ವಾರ್ಡ್‌ನ ರಸ್ತೆಗಳ ಅಭಿವೃದ್ಧಿಗಾಗಿ ಒಂದು ತಿಂಗಳ ಒಳಗೆ 110.75 ಕೋಟಿ ರೂ. ಹಾಗೂ ಎರಡು ತಿಂಗಳ ಒಳಗೆ 405.96 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಬಿಡುಗಡೆ ಮಾಡುವ ಸಂಬಂಧ ಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ದಾಸರಹಳ್ಳಿ ವಾರ್ಡ್‌ನ ರಸ್ತೆಗಳ ದುರಸ್ತಿ ಹಾಗೂ ಮೂಲಸೌಕರ್ಯ ಕೋರಿ ವಕೀಲ ಅಶ್ವತ್ಥ್ ನಾರಾಯಣ ಚೌಧರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ದಾಸರಹಳ್ಳಿ ವಲಯದ ಕಾರ್ಯ ನಿರ್ವಾಹಕ ಇಂಜಿನಿಯರ್ ಕೆ. ಸೈಯ್ಯದ್ ಅತಿಖುರ್ ರಹ್ಮಾನ್ ಇದ್ರಸ್ ಅವರ ಪ್ರಮಾಣಪತ್ರವನ್ನು ಬಿಬಿಎಂಪಿ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.
ಪ್ರಮಾಣಪತ್ರ ಪರಿಶೀಲಿಸಿದ ಪೀಠ, ಪಾಲಿಕೆ ಸಲ್ಲಿಸಿರುವ ಮನವಿ ಪರಿಗಣಿಸಿ ಮುಂದಿನ ಒಂದು ತಿಂಗಳ ಒಳಗೆ 110.75 ಕೋಟಿ ರೂ. ಹಾಗೂ ಎರಡು ತಿಂಗಳ ಒಳಗೆ 405.96 ಕೋಟಿ ರೂ.ಗಳನ್ನು ಬಿಬಿಎಂಪಿಗೆ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಿ ನಿರ್ಧಾರ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 27ಕ್ಕೆ ಮುಂದೂಡಿತು.