ಕರ್ನಾಟಕ

karnataka

ETV Bharat / city

ಅವೈಜ್ಞಾನಿಕ ನೀತಿ, ಷರತ್ತುಗಳಿಗೆ ಬೇಸತ್ತ ರೈತರು: 5% ರಷ್ಟೂ ಅನ್ನದಾತರ ತಲುಪದ ಬೆಳೆ ವಿಮೆ ಯೋಜನೆ

ಬೆಳೆ ವಿಮೆಗೆ ಹೆಸರು ನೋಂದಾಯಿಸಲು ಜೂನ್ ತಿಂಗಳ ಅಂತ್ಯದವರೆಗೆ ರೈತರಿಗೆ ಅವಕಾಶ ನೀಡಲಾಗಿತ್ತು. ಆದರೆ, ಹೆಚ್ಚಿನ ರೈತರು ನಿಗದಿತ ಸಮಯದೊಳಗೆ ನೋಂದಣಿ ಮಾಡದ್ದರಿಂದ ಜುಲೈ ತಿಂಗಳ 31 ರವರೆಗೆ ಹೆಸರು ನೋಂದಾಯಿಸುವ ಅವಧಿಯನ್ನು ಕೃಷಿ ಇಲಾಖೆ ವಿಸ್ತರಣೆ ಮಾಡಿದೆ.

ಬೆಳೆ ವಿಮೆ ಯೋಜನೆ
crop insurance policy

By

Published : Jul 28, 2022, 10:30 AM IST

ಬೆಂಗಳೂರು: ರೈತರ ಬೆಳೆ ಹಾನಿಯಾದ ಸಂದರ್ಭದಲ್ಲಿ ಪರಿಹಾರ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಬೆಳೆ ವಿಮೆ ಪದ್ಧತಿ ಜಾರಿಗೆ ತರಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಬಂದು 20ಕ್ಕೂ ಹೆಚ್ಚು ವರ್ಷಗಳಾದರೂ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ.

ಬೆಳೆ ವಿಮೆಯ ಅವೈಜ್ಞಾನಿಕ ನೀತಿ ಮತ್ತು ಷರತ್ತುಗಳಿಗೆ ಬೇಸತ್ತಿರುವ ರೈತರು ಬೆಳೆ ವಿಮೆ ಪಾಲಿಸಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾವಣೆ ಮಾಡಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯ, ಅತಿವೃಷ್ಟಿ, ಅನಾವೃಷ್ಟಿ, ರೋಗಗಳಿಂದ ಫಸಲಿಗೆ ಹಾನಿಯುಂಟಾದ ಸಂದರ್ಭಗಳಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗುವಂತೆ ಬೆಳೆ ವಿಮೆ ಪದ್ಧತಿಯನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನೆರವಿನೊಂದಿಗೆ ಜಾರಿಗೆ ತಂದಿದೆ. ಆದ್ರೆ, ಹೆಚ್ಚಿನ ಲಾಭದಾಯಕವಲ್ಲದ ಕಾರಣ ಬೆಳೆ ವಿಮೆ ಮಾಡಿಸಲು ರೈತರು ಆಸಕ್ತಿ ತೋರುತ್ತಿಲ್ಲ. ರಾಜ್ಯದಲ್ಲಿನ ಒಟ್ಟು ರೈತರ ಪೈಕಿ ಶೇ. 5ರಷ್ಟು ಅನ್ನದಾತರು ಸಹ ಬೆಳೆ ವಿಮೆ ಪಾಲಿಸಿ ಮಾಡಿಸಿಲ್ಲ.

ರಾಜ್ಯದಲ್ಲಿ ಒಟ್ಟು 85 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳಿವೆ. ಈ ಪೈಕಿ ಕಳೆದ ಜೂನ್ ತಿಂಗಳ ಅಂತ್ಯದವರೆಗೆ ಕೇವಲ 3.82 ಲಕ್ಷ ರೈತರಷ್ಟೇ ಬೆಳೆ ವಿಮೆಗೆ ಹೆಸರು ನೋಂದಣಿ ಮಾಡಿ ಪಾಲಿಸಿಯ ಪ್ರೀಮಿಯಂ ಹಣ ಪಾವತಿಸಿದ್ದಾರೆ. ಉಳಿದ ಶೇ. 95 ರಷ್ಟು ರೈತರು ಬೆಳೆ ವಿಮೆಗೆ ಹೆಚ್ಚಿನ ಆಸಕ್ತಿ ತೋರದೆ ದೂರ ಉಳಿದಿದ್ದಾರೆ.

ಬೆಳೆ ವಿಮೆಯತ್ತ ರೈತರನ್ನು ಆಕರ್ಷಿಸಲು ಕೃಷಿ ಇಲಾಖೆ ಸಾಕಷ್ಟು ಅರಿವು ಮೂಡಿಸುವ ಪ್ರಯತ್ನ ಮಾಡಿದರೂ ರೈತರಲ್ಲಿ ಹೆಚ್ಚಿನ ವಿಶ್ವಾಸ ಮೂಡಿಲ್ಲ. ಬೆಳೆ ವಿಮೆಯಿಂದ ರೈತರಿಗಿಂತ ವಿಮಾ ಕಂಪನಿ ಮಾಲೀಕರಿಗೆ ಲಾಭ ಎನ್ನುವ ಭಾವನೆ ಕೃಷಿಕರಲ್ಲಿ ಆಳವಾಗಿ ಬೇರೂರಿದೆ.

ಭತ್ತ, ಕಬ್ಬು ಅತ್ಯಧಿಕವಾಗಿ ಬೆಳೆಯುವ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಯಾವ ರೈತರೂ ಬೆಳೆ ವಿಮೆ ಮಾಡಿಸಿಲ್ಲ. ಬೆಂಗಳೂರು ನಗರ, ಗದಗ, ಉಡುಪಿ ಹಾಸನ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತ ಸಮುದಾಯ ಬೆಳೆ ವಿಮೆ ಬಗ್ಗೆ ಹೆಚ್ಚು ಆಕರ್ಷಿತರಾಗಿಲ್ಲ. ಕೇವಲ ಬೆರಳೆಣಿಕೆಯ ರೈತರು ಮಾತ್ರ ಈ ಜಿಲ್ಲೆಗಳಲ್ಲಿ ಕ್ರಾಪ್ ಇನ್ಸುರನ್ಸ್ ನೋಂದಣಿ ಮಾಡಿಸಿದ್ದಾರೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ರೈತರು ಹೆಸರು ನೋಂದಾಯಿಸಿ ಆಶಾಭಾವನೆ ಮೂಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,18,081 ರೈತರು, ಉತ್ತರ ಕನ್ನಡ ಜಿಲ್ಲೆಯಲ್ಲಿ - 85,375, ಶಿವಮೊಗ್ಗ - 44,046, ಚಿಕ್ಕಮಗಳೂರು - 29,923, ತುಮಕೂರು - 20,289, ವಿಜಯಪುರ - 16,267, ಹಾವೇರಿ - 14,344, ಹಾಸನ - 9,317, ದಾವಣಗೆರೆ ಜಿಲ್ಲೆಯಲ್ಲಿ 9,205 ರೈತರು ಬೆಳೆ ವಿಮೆಗೆ ಹೆಸರು ನೋಂದಾಯಿದ್ದಾರೆ.

ಜೂನ್‌ ತಿಂಗಳ ಅಂತ್ಯದವರೆಗೆ ರಾಜ್ಯದಲ್ಲಿ 85 ಲಕ್ಷ ರೈತ ಕುಟುಂಬದ ಪೈಕಿ ಕೇವಲ 3 ಲಕ್ಷದ 82 ಸಾವಿರ ರೈತರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳೆ ವಿಮೆ ನೋಂದಣಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಉತ್ತರ ಕನ್ನಡ ಜಿಲ್ಲೆ ದ್ವಿತೀಯ ಸ್ಥಾನ ಹಾಗೂ ಶಿವಮೊಗ್ಗ ಜಿಲ್ಲೆ ತೃತೀಯ ಸ್ಥಾನದಲ್ಲಿದೆ.

ರೈತರ ನಿರಾಸಕ್ತಿಗೆ ಕಾರಣ:ಬೆಳೆ ವಿಮಾ ಪಾಲಿಸಿ ಪಡೆಯಲು ಅವೈಜ್ಞಾನಿಕ ಷರತ್ತುಗಳೇ ರೈತರು ಆಸಕ್ತಿ ತೋರದಿರಲು ಪ್ರಮುಖ ಕಾರಣವಾಗಿದೆ. ಬರಗಾಲ ಮತ್ತು ಹೆಚ್ಚಿನ ಮಳೆಯಿಂದ ಬೆಳೆ ಹಾನಿ ಉಂಟಾದರೂ ರೈತರಿಗೆ ನಿರೀಕ್ಷಿತ ವಿಮಾ ಪರಿಹಾರ ಸಿಗುವುದಿಲ್ಲ. ಕೆಲವೊಮ್ಮೆ ರೈತರು ಪಾವತಿಸಿದ ಪಾಲಿಸಿಯ ಪ್ರೀಮಿಯಮ್ ಹಣವೂ ಸಹ ಪರಿಹಾರವಾಗಿ ಸಿಗುವುದಿಲ್ಲ. ಹೋಬಳಿ ಕೇಂದ್ರ ಆಧಾರವಾಗಿಟ್ಟುಕೊಂಡು ವಿಮಾ ಕಂಪನಿ ಬೆಳೆ ಪರಿಹಾರ ನೀಡುವ ಬಗ್ಗೆ ನಿರ್ಧರಿಸುವುದರಿಂದ ಬೆಳೆ ನಷ್ಟಕ್ಕೀಡಾದ ರೈತರಿಗೆ ಸರಿಯಾದ ಪ್ರಮಾಣದಲ್ಲಿ ವಿಮಾ ಪರಿಹಾರ ಹಣ ಸಿಗುವುದಿಲ್ಲ ಎನ್ನುವುದು ರೈತ ಸಂಘಟನೆಗಳ ವಾದ .

"ಬೆಳೆ ವಿಮೆಯನ್ನು ಆಯಾ ರೈತರ ಜಮೀನಿಗೆ ಅನುಗುಣವಾಗಿ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ಬಂದರೆ ಹೆಚ್ಚಿನ ರೈತರಿಗೆ ಸಹಾಯವಾಗುತ್ತದೆ. ಆಗ ಬೆಳೆ ವಿಮೆಯೂ ಯಶಸ್ವಿಯಾಗುತ್ತದೆ" ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ರೈತರ ಬೆಳೆ ವಿಮೆ ನೀತಿ ಬಹಳ ಅವೈಜ್ಞಾನಿಕತೆಯಿಂದ ಕೂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಅನುಕೂಲಕರವಾಗಿರುವಂತೆ ಬೆಳೆ ವಿಮೆ ನೀತಿ ರೂಪಿಸಿಲ್ಲ. ಸದ್ಯ ಜಾರಿಯಲ್ಲಿರುವ ಬೆಳೆ ವಿಮೆಯು ವಿಮಾ ಕಂಪನಿಗಳ ಪರವಾಗಿವೆ. ಫಸಲ್ ಭಿಮಾ ಯೋಜನೆಯ ಕಂಪನಿ ದೇಶದ ಪ್ರಸಿದ್ಧ ಉದ್ದಿಮೆದಾರ ಅದಾನಿಯವರಿಗೆ ಸೇರಿದ್ದಾಗಿದೆ. ಬೆಳೆ ವಿಮೆ ಪಾಲಿಸಿ ನೀಡಿದ ಕಂಪನಿ ಲಾಭ ಮಾಡುತ್ತಿದೆ. ಆದರೆ ಫಾಲಿಸಿ ಮಾಡಿಸಿದ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ" ಎನ್ನುವುದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಅಭಿಮತ.

ಇದನ್ನೂ ಓದಿ:ಭಾರ್ತಿ AXAಗೆ ₹ 800 ಕೋಟಿ ಫಸಲ್‌ ಬೀಮಾ ಬೆಳೆ ವಿಮೆ: ರಾಜ್ಯದ ಈ 3 ಜಿಲ್ಲೆಗಳ ರೈತರಿಗೆ ವಿಸ್ತರಣೆ

ABOUT THE AUTHOR

...view details