ಬೆಂಗಳೂರು:ರಾಜ್ಯ ರಾಜಧಾನಿಯಲ್ಲಿ ಪ್ರತಿದಿನ ಸಾವಿರದಷ್ಟು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಆದರೆ ಎಷ್ಟೋ ಜನರಿಗೆ ಸೂಕ್ತ ಸಮಯದಲ್ಲಿ, ಸರಿಯಾದ ಚಿಕಿತ್ಸೆ ಸಿಗದೆ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ನಗರದಲ್ಲಿ ಜುಲೈ 8ರವರೆಗೆ 12,509 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 177 ಮಂದಿ ಮೃತಪಟ್ಟಿದ್ದಾರೆ. ಆದರೆ ಗುಣಮುಖರಾಗುತ್ತಿರುವವರ ಪ್ರಮಾಣ ಇಳಿಕೆಯಾಗಿದ್ದು, ಈವರೆಗೆ 2,228 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಇದರ ಜೊತೆಗೆ ಆಸ್ಪತ್ರೆಗಳ ದುಸ್ಥಿತಿ ಬಗ್ಗೆಯೂ ವರದಿಯಾಗುತ್ತಿದೆ.
ಆಸ್ಪತ್ರೆಗಳಲ್ಲಿ ಹಾಸಿಗೆ ಸೌಲಭ್ಯ, ವೈದ್ಯರ ಕೊರತೆ:
ನಗರದ ಕೋವಿಡ್ ಆಸ್ಪತ್ರೆಗಳಾದ ವಿಕ್ಟೋರಿಯಾ, ಬೌರಿಂಗ್, ರಾಜೀವ್ ಗಾಂಧಿ, ಕೆ.ಸಿ.ಜನರಲ್ ಹಾಗೂ ರಾಜಾಜಿನಗರದ ಇಎಸ್ಐ ಆಸ್ಪತ್ರೆಗಳಲ್ಲಿ ಜೂನ್ ತಿಂಗಳಲ್ಲೇ ಬೆಡ್ಗಳು ಖಾಲಿಯಾಗಿವೆ. ಗುಣಮುಖರಾಗುತ್ತಿರುವುದು ಕೂಡಾ ವಿಳಂಬವಾಗುತ್ತಿರುವ ಕಾರಣದಿಂದ ಹೊಸ ರೋಗಿಗಳಿಗೆ ಹಾಸಿಗೆ ಸೌಲಭ್ಯ ಸಿಗುತ್ತಿಲ್ಲ. ಕೆಲವೆಡೆ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ.
ವಿಕ್ಟೋರಿಯದಲ್ಲಿ ಚೆನ್ನಾಗಿ ನೋಡಿಕೊಂಡಿಲ್ಲ..!
ಚಿಕ್ಕಪೇಟೆ ವಾರ್ಡ್ನ ಕೋವಿಡ್ ಪಾಸಿಟಿವ್ ಮಹಿಳೆಯೊಬ್ಬರು ವಿಕ್ಟೋರಿಯಾಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ಅಲ್ಲಿನ ಅವ್ಯವಸ್ಥೆ ಕಂಡು ಇನ್ನಷ್ಟು ಭೀತಿಗೊಳಗಾಗಿದ್ದರು. ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ''ವಿಕ್ಟೋರಿಯಾದಲ್ಲಿ ಊಟ, ತಿಂಡಿಗೆ ಕೊರತೆ ಇರಲಿಲ್ಲ. ಆದರೆ ಚಿಕಿತ್ಸೆಯೇ ಸರಿಯಾಗಿ ಸಿಗುತ್ತಿರಲಿಲ್ಲ. ಮುನ್ನೂರು ರೋಗಿಗಳಿಗೆ ಕೇವಲ ಮೂರೇ ವೈದ್ಯರಿದ್ದರು. ವಾರ್ಡ್ಗೆ ಡಾಕ್ಟರ್ ಬರುತ್ತಿರಲಿಲ್ಲ. ರೋಗಿಗಳೇ ಏನಾದ್ರೂ ಬೇಕಂದ್ರೆ ಆರನೇ ಮಹಡಿಗೆ ಹೋಗಿ ವೈದ್ಯರನ್ನು ಭೇಟಿಯಾಗಬೇಕಿತ್ತು. ಅಲ್ಲಿ ಎಲ್ಲರೂ ಗುಂಪುಗೂಡುತ್ತಿದ್ದರು. ಬಾಗಿಲ ಬಳಿ ನಿಂತು ಜ್ವರದ ಸುಸ್ತಿನಲ್ಲೇ ಕಾಯುವುದು ಹರಸಾಹಸವಾಗಿತ್ತು. ಸೊಂಕಿತರನ್ನು ಪರೀಕ್ಷೆ ಮಾಡೋಕೆ ಯಾವುದೇ ಯಂತ್ರವೂ ಕೂಡಾ ಅಲ್ಲಿರಲಿಲ್ಲ'' ಎಂದಿದ್ದಾರೆ.
ಇಪ್ಪತ್ತು ಜನರಿಗೆ ಎರಡೇ ಆಕ್ಸಿಜನ್ ಸಿಲಿಂಡರ್..!
ಸರಿಯಾದ ಸಮಯಕ್ಕೆ ಚಿಕಿತ್ಸೆ, ವೆಂಟಿಲೇಟರ್ ಸೌಲಭ್ಯ ಸಿಗದೆ 53 ವರ್ಷದ ನಂದಿನಿ ಲೇಔಟ್ನ ವ್ಯಕ್ತಿ ಮೃತಪಟ್ಟಿದ್ದಾರೆ. ಇವರ ಬಗ್ಗೆ ಮಾತನಾಡಿದ ಸ್ನೇಹಿತ ರಮೇಶ್, ಸುದರ್ಶನ್ ಅವರಿಗೆ 31ನೇ ತಾರೀಕು ಇಎಸ್ಐ ಆಸ್ಪತ್ರೆಯಲ್ಲಿ ಆರಂಭದಲ್ಲಿ ಕೋವಿಡ್ ಟೆಸ್ಟ್ ಕೂಡಾ ಸರಿಯಾಗಿ ಮಾಡಿಲ್ಲ. ಬಳಿಕ ಸಂಜೀವಿನಿ ಖಾಸಗಿ ಆಸ್ಪತ್ರೆಯಲ್ಲಿ 4-5 ಸಾವಿರ ಖರ್ಚು ಮಾಡಿ ರಿಪೋರ್ಟ್ ತರಿಸಿಕೊಂಡಿದ್ದಾರೆ. ಉಸಿರಾಟದ ಸಮಸ್ಯೆ ತೀವ್ರಗೊಂಡು ಆಸ್ಪತ್ರೆಗೆ ಹೋಗಲು ಮುಂದಾದಾಗ ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಂಡಿಲ್ಲ. ರಾಜಾಜಿ ನಗರದ ಇಎಸ್ಐ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲದೇ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಕಟ್ಟುವವರೆಗೆ ಬಿಡೋದಿಲ್ಲ ಎಂದ ಅಪೊಲೊ ಆಸ್ಪತ್ರೆ..!
ಅಪೊಲೊ ಆಸ್ಪತ್ರೆ ರೋಗಿಯ ಕುಟುಂಬಸ್ಥರಿಗೆ ಬಿಲ್ ನೀಡದೆ ಡಿಶ್ಚಾರ್ಜ್ ಮಾಡುವುದಿಲ್ಲ ಎಂದು ಒತ್ತಾಯಿಸಿದ ಅಮಾನವೀಯ ಘಟನೆ ಇಂದು ನಡೆದಿದೆ. ಜುಲೈ ಒಂದರಂದು ಉಸಿರಾಟದ ಸಮಸ್ಯೆಯಿಂದ ರೋಗಿಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ಕೊರೊನಾ ಟೆಸ್ಟ್ ಮಾಡಿಸುವ ಮೊದಲು ಮೂವತ್ತು ಸಾವಿರ ಕಟ್ಟಿಸಿಕೊಂಡಿದ್ದಾರೆ. ಶನಿವಾರ ಪಾಸಿಟಿವ್ ಎಂದು ಮಾಹಿತಿ ನೀಡಿದ್ದಾರೆ. ಹಣ ಕಟ್ಟಿ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದಿದ್ದಾರೆ. ಬಿಬಿಎಂಪಿ ರಾಜಾಜಿನಗರದ ಇಎಸ್ಐ ಆಸ್ಪತ್ರೆ ವ್ಯವಸ್ಥೆ ಮಾಡಿದ್ದರೂ ಬಿಲ್ ಕಟ್ಟದೇ ರೋಗಿಯನ್ನು ಡಿಸ್ಚಾರ್ಜ್ ಮಾಡೋದಿಲ್ಲ ಎಂದು ಒತ್ತಾಯಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ಗಳಲ್ಲಿ ಶೌಚಾಲಯ ಸೌಲಭ್ಯಗಳಿಲ್ಲ:
ಬಿಬಿಎಂಪಿ ಸೋಂಕು ಲಕ್ಷಣ ಇಲ್ಲದ ಕೋವಿಡ್ ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿದೆ. ಈಗಾಗಲೇ ಹಜ್ ಭವನ, ರವಿಶಂಕರ್ ಗುರೂಜಿ ಆಶ್ರಮ ಭರ್ತಿಯಾಗಿದೆ. ಜಿಕೆವಿಕೆ ಹಾಸ್ಟೆಲ್ಗಳಲ್ಲಿ, ಆವರಣದಲ್ಲಿ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ರೆ ಶೌಚಾಲಯ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ ಎಂದು ಪಾಲಿಕೆ ಸದಸ್ಯ ಎಂ.ಶಿವರಾಜು ಮಾಹಿತಿ ನೀಡಿದ್ದಾರೆ.