ಬೆಂಗಳೂರು: ಕೊರೊನಾ ನಮ್ಮ ನಡುವೆ ಬಂದು ಬರೊಬ್ಬರಿ 7 ತಿಂಗಳೇ ಕಳೆದಿವೆ. ಆದರೂ ಮಹಾಮಾರಿ ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ. ಎಲ್ಲ ಕ್ಷೇತ್ರಗಳ ಬುಡವನ್ನೇ ಅಲ್ಲಾಡಿಸಿರುವ ಈ ಸೋಂಕಿನಿಂದ ಸ್ವ-ಸಹಾಯ ಗುಂಪುಗಳು ದೊಡ್ಡಮಟ್ಟದ ಸಂಕಷ್ಟವನ್ನೇ ತಂದೊಡ್ಡಿದೆ.
ಕೊರೊನಾ ಪರಿಣಾಮ ಸಾವಿರಾರು ಸ್ವಸಹಾಯ ಗುಂಪುಗಳ ಮಹಿಳೆಯರ ಬದುಕು ಅತಂತ್ರದಲ್ಲಿದೆ. ಸಾಲ ಪಡೆದು ಸಣ್ಣಪುಟ್ಟ ಉದ್ಯಮ ಆರಂಭಿಸಿದವರಿಗೆ ಅದನ್ನು ಮರುಪಾವತಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಸ್ವಸಹಾಯ ಗುಂಪುಗಳ ಮೂಲಕ ಉದ್ಯಮ ಆರಂಭಿಸಿ ಬದುಕು ಕಟ್ಟಿಕೊಂಡವರು ಅದೆಷ್ಟೋ ಮಂದಿ. ಆದರೆ, ಅವರೀಗ ಸಾಕಷ್ಟು ತೊಂದರೆಯಲ್ಲಿದ್ದಾರೆ.
ಈ ಕುರಿತು ಈಟಿವಿ ಭಾರತ್ ಜೊತೆಗೆ ಸ್ವಸಹಾಯ ಸಂಘದ ಸದಸ್ಯೆ ರೋಹಿಣಿ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಬದುಕುಲು ತಾವೇ ಶುರು ಮಾಡಿದ ಚಟುವಟಿಕೆಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಅದರಲ್ಲೂ ಆಹಾರ ಉತ್ಪನ್ನಗಳ ಮಾರಾಟಕ್ಕೆ ಸರಿಯಾದ ಅವಕಾಶವೇ ಸಿಗಲಿಲ್ಲ. ಅದೆಷ್ಟೋ ಅಂಗಡಿ ಮಳಿಗೆಗಳು ಬಾಗಿಲು ಮುಚ್ಚಿದವು ಎಂದು ಬೇಸರ ವ್ಯಕ್ತಪಡಿಸಿದರು.
ಹೊಸ ದಾರಿ ತೋರಿಸಿದ ಹೊಲಿಗೆ ಯಂತ್ರ
ಕೊರೊನಾ ಸಂಕಷ್ಟದ ನಡುವೆ ಕೊಂಚ ನಿರಾಳವಾಗಿರುವುದು ಹೊಲಿಗೆ ಯಂತ್ರ ಹೊಂದಿರುವ ಮಹಿಳೆಯರು ಮಾತ್ರ. ವೈರಸ್ ತಡೆಯಲು ಅತಿ ಮುಖ್ಯವಾದ ಅಸ್ತ್ರಗಳು ಮಾಸ್ಕ್ ಹಾಗೂ ಗೌನ್. ಅವುಗಳಿಗೆ ಬೇಡಿಕೆ ಹೆಚ್ಚಾಗಿದ್ದೇ ತಡ, ಹೊಲಿಗೆ ಯಂತ್ರ ಅವಲಂಬಿಸಿದವರಿಗೆ ಬೇಡಿಕೆ ಹೆಚ್ಚಾಯಿತು. ಅಲ್ಲದೆ, ಅವರಿಗೆ ಹೊಸ ದಾರಿ ತೋರಿತು. ಎಲ್ಲ ಮಹಿಳೆಯರು ಒಂದೇ ಚಟುವಟಿಕೆ ಹೊಂದಿರದ ಕಾರಣ ಭಾಗಶಃ ಸ್ವಸಹಾಯ ಗುಂಪು ಮೂಲೆ ಸೇರುವಂತಾಯಿತು ಎನ್ನುತ್ತಾರೆ ರೋಹಿಣಿ.
ಕೊರೊನಾ ಸಂಕಷ್ಟದ ಕುರಿತು ಸ್ವ-ಸಹಾಯ ಸಂಘದ ಸದಸ್ಯೆ ರೋಹಿಣಿ ಮಾತು ಅಡ್ಡಗಾಲು: ಸ್ವ ಸಹಾಯ ಸಂಘದ ಸಭೆ ಸೇರಲು ಆಗಲಿಲ್ಲ. ಉತ್ಪನ್ನಗಳು ಸಿದ್ಧವಾಗಿದ್ದರೂ ಸಂಚಾರ-ಸಾಗಣೆ ಸೌಕರ್ಯಗಳು ಮತ್ತು ಮಾರುಕಟ್ಟೆಗಳು ಇಲ್ಲದೆ ಮಹಿಳೆಯರಿಗೆ ಕಷ್ಟವಾಯಿತು. ಉತ್ಪತ್ತಿಯೂ ಇಲ್ಲ. ಆದಾಯವೂ ಇಲ್ಲ. ಹೀಗಾಗಿ ಪಡೆದ ಸಾಲವನ್ನು ಮರುಪಾವತಿ ಮಾಡಲಾಗದೇ ಮತ್ತೆ ಸಾಲ ಪಡೆಯುವ ಪರಿಸ್ಥಿತಿ ಬಂದೊದಗಿದೆ.