ಬೆಂಗಳೂರು:ಪೊಲೀಸರಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸಿಲಿಕಾನ್ ಸಿಟಿಯಲ್ಲಿ ಒಟ್ಟು 140ಕ್ಕೂ ಅಧಿಕ ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಸುಮಾರು 31 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಪೊಲೀಸರಿಗೆ ಬಿಡದೇ ಕಾಡುತ್ತಿರುವ ಮಹಾಮಾರಿ: ಬೆಂಗಳೂರಲ್ಲೇ 140ಕ್ಕೂ ಅಧಿಕ ಸಿಬ್ಬಂದಿಗೆ ಕೊರೊನಾ! - ಬೆಂಗಳೂರಿನಲ್ಲಿ ಕೊರೊನಾ
ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಗೂ ಕೊರೊನಾ ಆತಂಕ ಮೂಡಿಸಿದೆ. ಈ ಮೊದಲೇ ಸೀಲ್ ಡೌನ್ ಮಾಡಲಾಗಿದ್ದ ಠಾಣೆಗಳಲ್ಲಿನ ಪೊಲೀಸರಿಗೆ ಕೊರೊನಾ ಕಾಣಿಸಿಕೊಂಡಿದ್ದು ತಲೆನೋವಾಗಿ ಪರಿಣಮಿಸಿದೆ.
ಕೊರೊನಾ ಸೋಂಕಿತ ಪೊಲೀಸರ ಸಂಪರ್ಕದಲ್ಲಿದ್ದ ಸುಮಾರು 890 ಸಹೋದ್ಯೋಗಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರ ಕಚೇರಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ, ಎಸಿಬಿ, ಟ್ರಾಫಿಕ್ ಆಯುಕ್ತರ ಕಚೇರಿ, ಕೆಎಸ್ಆರ್ಪಿ ಸೇರಿದಂತೆ ಎಲ್ಲಾ ಪ್ರಮುಖ ಕಚೇರಿಗಳ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಅಷ್ಟು ಮಾತ್ರವಲ್ಲದೆ ಸೀಲ್ ಡೌನ್ ಆಗಿದ್ದ ಠಾಣೆಗಳಲ್ಲಿನ ಪೊಲೀಸರಿಗೂ ಸೋಂಕು ಹರಡಿದೆ. ತಿಲಕ್ ನಗರ, ಕಾಮಾಕ್ಷಿಪಾಳ್ಯ, ವಿಲ್ಸನ್ ಗಾರ್ಡನ್, ಸಿಟಿ ಮಾರ್ಕೆಟ್ ಠಾಣೆಗಳನ್ನು ಈ ಮೊದಲೇ ಸೀಲ್ ಡೌನ್ ಮಾಡಿ ಮತ್ತೆ ತೆರೆಯಲಾಗಿತ್ತು. ಈಗ ಮತ್ತೆ ಅದೇ ಠಾಣೆಗಳ ಪೊಲೀಸರಲ್ಲಿ ಸೋಂಕು ದೃಢವಾಗುತ್ತಿದ್ದು ಆತಂಕ ಮೂಡಿಸಿದೆ.