ಬೆಂಗಳೂರು :ಆರ್ಥಿಕ ಸ್ವಾಯತ್ತತೆ ನಿಯಂತ್ರಣ (Financial autonomy control) ಜವಾಬ್ದಾರಿಯನ್ನು ನೀಡುವ ಬಗ್ಗೆ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwara Hegde Kageri) ಅವರು ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1921ರಲ್ಲಿ ವಿಧಾನಸಭಾ ಸಚಿವಾಲಯಕ್ಕೆ ಆರ್ಥಿಕ ಸ್ವಾಯತ್ತತೆ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಲೋಕಸಭೆಯಲ್ಲಿ ಆರ್ಥಿಕ ಸ್ವಾಯತ್ತತೆ (Financial autonomy) ನೀಡಲಾಗಿದೆ.
ಆದರೆ, ರಾಜ್ಯಗಳಿಗೆ ನೀಡಲಾಗಿಲ್ಲ. ಆರ್ಥಿಕ ಸ್ವಾಯತ್ತತೆ ನೀಡಲು ಪೀಠಾಸೀನರ ಸಮಿತಿ ಮಾಡಿ. ಸಿಎಂ ಮತ್ತು ವಿಪಕ್ಷಗಳ ಸಮ್ಮುಖದಲ್ಲಿ ಅನುಮತಿ ನೀಡಲು ನಿರ್ಧಾರ ಮಾಡಿದ್ದೇವೆ. ಅಂದುಕೊಂಡಂತಾದರೆ ನಮ್ಮ ರಾಜ್ಯವೂ ಆರ್ಥಿಕ ಸ್ವಾಯತ್ತತೆ ಸಾಲಿನಲ್ಲಿ ಸೇರಲಿದೆ ಎಂದರು.
ಅತ್ಯುತ್ತಮ ವಿಧಾನಸಭೆ-ಅತ್ಯುತ್ತಮ ವಿಧಾನ ಪರಿಷತ್ ಪ್ರಶಸ್ತಿ :ರಾಷ್ಟ್ರಪತಿ, ರಾಜ್ಯಪಾಲರ ಭಾಷಣ, ಪ್ರಶ್ನೋತ್ತರ ವೇಳೆ ಸದನದಲ್ಲಿ ಗದ್ದಲ ಉಂಟಾಗದಂತೆ ನೋಡಿಕೊಳ್ಳಲು ಸರ್ವ ಪಕ್ಷಗಳ ಜೊತೆಗೆ ಸಮಾಲೋಚಿಸಿ ನಿರ್ಣಯ ಕೈಗೊಳ್ಳಲಾಗುವುದು. ನೂತನ ಆಯ್ಕೆಯಾಗುವ ಶಾಸಕರಿಗೆ ತರಬೇತಿ ನೀಡಲಾಗುತ್ತದೆ.
ಅತ್ಯುತ್ತಮ ವಿಧಾನಸಭೆ- ಅತ್ಯುತ್ತಮ ವಿಧಾನ ಪರಿಷತ್ ಪ್ರಶಸ್ತಿ ನೀಡಲು ಹಿಂದೆಯೇ ಚರ್ಚೆಯಾಗಿತ್ತು. ಉತ್ತಮ ವಿಧಾನಸಭೆ, ಪರಿಷತ್ ಪ್ರಶಸ್ತಿ ನೀಡಲು ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಿಮ್ಲಾದಲ್ಲಿ ಪೀಠಾಸಿನಾಧಿಕಾರಿಗಳ ಸಮ್ಮೇಳನ :ನವೆಂಬರ್ 17 ಮತ್ತು 18ರಂದು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಪೀಠಾಸಿನಾಧಿಕಾರಿಗಳ ಸಮ್ಮೇಳನ ನಡೆಯಿತು. 26 ರಾಜ್ಯಗಳ ವಿಧಾನಸಭಾಧ್ಯಕ್ಷರು, ಸಚಿವಾಲಯದ ಕಾರ್ಯದರ್ಶಿಗಳು, ಅಧಿಕಾರಿಗಳು ಭಾಗವಹಿಸಿದ್ದರು. ಅತ್ಯಂತ ಯಶಸ್ವಿಯಾಗಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ.