ಕರ್ನಾಟಕ

karnataka

ETV Bharat / city

ಪ್ರತ್ಯೇಕ ಬೆಳೆ ವಿಮೆ ಯೋಜನೆ ಕೈ ಬಿಟ್ಟ ಮೈತ್ರಿ ಸರ್ಕಾರ!

ಮೈತ್ರಿ ಸರ್ಕಾರ, ಸದ್ಯ ಪ್ರತ್ಯೇಕ ಬೆಳೆ ವಿಮೆ ಯೋಚನೆಯನ್ನು ಕೈ ಬಿಟ್ಟಿದೆ. ಅದರ ಬದಲಿಗೆ ಫಸಲ್‌ ವಿಮಾ ಯೋಜನೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿಯೇ ಮೊಬೈಲ್ ಆ್ಯಪ್ ಮೂಲಕ ಜಿಪಿಎಸ್ ಆಧಾರಿತ ನಿಖರ ಬೆಳೆ ಸಮೀಕ್ಷೆ, ಬೆಳೆ ವಿಮೆ ಸಂಸ್ಥೆಗಳ‌ ಕ್ಲಸ್ಟರ್ ಮಾಡಿ, ಕ್ಲಸ್ಟರ್​ವಾರು ವಿಮೆ‌ ಸಂಸ್ಥೆ ನೇಮಕ ಮಾಡಲು ನಿರ್ಧರಿದ್ದು, ಹಲವು ಸುಧಾರಣೆಗಳನ್ನು ಮಾಡಲು ಮುಂದಾಗಿದೆ.

ಬೆಳೆ ವಿಮೆ ಯೋಜನೆ ಕೈ ಬಿಟ್ಟ ಮೈತ್ರಿ ಸರ್ಕಾರ

By

Published : Jun 28, 2019, 11:46 PM IST

ಬೆಂಗಳೂರು:ಮೈತ್ರಿ ಸರ್ಕಾರ ಕರ್ನಾಟಕದಲ್ಲಿ ತನ್ನದೇ ಆದ ಬೆಳೆ ವಿಮೆ ಯೋಜನೆಯನ್ನು ಜಾರಿಗೆ ತರಲು ಚಿಂತನೆ‌ ನಡೆಸಿತ್ತು. ಆದರೆ, ಕೃಷಿ ಇಲಾಖೆಯ ಅಧಿಕಾರಿಗಳ ಅಧ್ಯಯನ ತಂಡ ಪ್ರತ್ಯೇಕ ಬೆಳೆ ವಿಮೆ ಯೋಜನೆ ಅನುಷ್ಠಾನ ಕಾರ್ಯಸಾಧುವಲ್ಲ ಎಂಬ ವರದಿ ನೀಡಿದ ಹಿನ್ನೆಲೆ ಇದೀಗ ಮೈತ್ರಿ ಸರ್ಕಾರ ಆ ಚಿಂತನೆಯನ್ನು ಕೈ ಬಿಟ್ಟಿದೆ.

ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯಿಂದ‌ ರೈತರಿಗಿಂತ ವಿಮೆ‌ ಕಂಪನಿಗಳಿಗೇ ಹೆಚ್ಚು ಲಾಭ ಆಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರದ ಬೆಳೆ ವಿಮೆಯಲ್ಲಿನ ಹಲವು ಸಂಕೀರ್ಣ ನಿಯಮಗಳು ಹಾಗೂ ರೈತರಿಗೆ ವಿಮೆ ಮೊತ್ತವನ್ನು ಪಡೆಯಲು ಸಾಧ್ಯವಾಗದೇ ಇರುವುದು ರೈತರನ್ನು ಕಂಗೆಡಿಸಿದೆ. ಇದಕ್ಕಾಗಿಯೇ ಮೈತ್ರಿ ಸರ್ಕಾರ ಪ್ರತ್ಯೇಕ ಬೆಳೆ ವಿಮೆ ಯೋಜನೆಯ ಚಿಂತನೆ ನಡೆಸಿತ್ತು. ಅದರಲ್ಲೂ ಬಿಹಾರ ಮಾದರಿ ಯೋಜನೆ ಬಗ್ಗೆ ಆಸಕ್ತಿ ವಹಿಸಿ, ಅಲ್ಲಿಗೆ ಅಧ್ಯಯನ ತಂಡ ಕಳುಹಿಸಿತ್ತು.

ಪ್ರತ್ಯೇಕ ಯೋಜನೆ ಸಾಧುವಲ್ಲ ಎಂಬ ವರದಿ...

ಈಗಾಗಲೇ ಬಿಹಾರಕ್ಕೆ ಕೃಷಿ ಅಧಿಕಾರಿಗಳ ತಂಡ ತೆರಳಿ ಅಲ್ಲಿನ ಬೆಳೆ ಸಹಾಯತಾ ಯೋಜನೆಯನ್ನು ಅಧ್ಯಯನ ನಡೆಸಿದೆ. ಆದರೆ, ಅಲ್ಲಿನ ಯೋಜನೆಯಲ್ಲೂ ಕೆಲ ಲೋಪದೋಷಗಳಿರುವುದು ಕಂಡು ಬಂದಿದೆ.

ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆಯಂತೆ ಬಿಹಾರದಲ್ಲೂ ರೈತರಿಗೆ ನೀಡಬೇಕಾದ ಪರಿಹಾರ ಮೊತ್ತ, ಭಾರಿ ಪ್ರಮಾಣದಲ್ಲಿ ಬಾಕಿ ಉಳಿದುಕೊಂಡಿರುವ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ಅಲ್ಲೂ ಸಂಪೂರ್ಣವಾದ ರೈತ ಸ್ನೇಹಿ ಯೋಜನೆ ಇಲ್ಲ ಎಂಬ ಅಂಶ ಅಧ್ಯಯನ ತಂಡದ‌ ಗಮನಕ್ಕೆ ಬಂದಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ. ಅದರ ಬದಲು ಫಸಲ್‌ ವಿಮಾ‌ ಯೋಜನೆಯಲ್ಲಿ ಕೆಲ‌ ಸುಧಾರಣೆ ತಂದು ಪರಿಣಾಮಕಾರಿಯಾಗಿ ಅನುಷ್ಠಾ‌ನ ಮಾಡುವಂತೆ ಅಭಿಪ್ರಾಯ ಪಟ್ಟಿದೆ.

ಪ್ರತ್ಯೇಕ ಬೆಳೆ ವಿಮೆ ಜಾರಿ ಕಷ್ಟ...

ರಾಜ್ಯದಲ್ಲಿ ಸಮಗ್ರ ಪ್ರತ್ಯೇಕ ಬೆಳೆ ವಿಮೆ ಯೋಜನೆ ಜಾರಿಗೊಳಿಸುವ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಹಾರ ಮಾದರಿ ಯೋಜನೆಯನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಒಂದು ವೇಳೆ ಬಿಹಾರ ಮಾದರಿಯ ಪ್ರತ್ಯೇಕ ಯೋಜನೆ ಜಾರಿಗೊಳಿಸಿದರೆ ರಾಜ್ಯ ಸರ್ಕಾರದ ಮೇಲೆ ದೊಡ್ಡ ಹಣಕಾಸು ಹೊರೆ ಬೀಳಲಿದೆ. ಸದ್ಯದ ಹಣಕಾಸು ಬಾಧ್ಯತೆಗಳ ಮಧ್ಯೆ ಪ್ರತ್ಯೇಕ ಬೆಳೆ ವಿಮೆ ಯೋಜನೆ ಜಾರಿ ಕಷ್ಟ ಸಾಧ್ಯ ಎಂಬುದು ಕೃಷಿ ಇಲಾಖೆ ಅಧಿಕಾರಿಗಳು ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಹಾರ ಮಾದರಿಯ ಯೋಜನೆಯಿಂದಲೂ ರೈತರಿಗೆ ಸಂಪೂರ್ಣ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಬಿಹಾರ ಮಾದರಿಯನ್ನೇ ರಾಜ್ಯದಲ್ಲಿ ಅಳವಡಿಸಿದರೂ ರೈತರ ಕಷ್ಟ ನೀಗುವುದಿಲ್ಲ ಎಂಬ ಅಂಶವನ್ನು ಮನಗಂಡ ಮೈತ್ರಿ ಸರ್ಕಾರ, ಸದ್ಯ ಪ್ರತ್ಯೇಕ ಬೆಳೆ ವಿಮೆ ಯೋಚನೆಯನ್ನು ಕೈ ಬಿಟ್ಟಿದೆ.

ಅದರ ಬದಲಿಗೆ ಫಸಲ್‌ ವಿಮಾ ಯೋಜನೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿಯೇ ಮೊಬೈಲ್ ಆ್ಯಪ್ ಮೂಲಕ ಜಿಪಿಎಸ್ ಆಧಾರಿತ ನಿಖರ ಬೆಳೆ ಸಮೀಕ್ಷೆ, ಬೆಳೆ ವಿಮೆ ಸಂಸ್ಥೆಗಳ‌ ಕ್ಲಸ್ಟರ್ ಮಾಡಿ, ಕ್ಲಸ್ಟರ್​ವಾರು ವಿಮೆ‌ ಸಂಸ್ಥೆ ನೇಮಕ ಮಾಡಲು ನಿರ್ಧರಿದ್ದು, ಹಲವು ಸುಧಾರಣೆಗಳನ್ನು ಮಾಡಲು ಮುಂದಾಗಿದೆ.

For All Latest Updates

TAGGED:

ABOUT THE AUTHOR

...view details