ಬೆಂಗಳೂರು:ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮುಗಿಸಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎರಡು ಪಟ್ಟಿಗಳೊಂದಿಗೆ ಇಂದು ರಾತ್ರಿ ದೆಹಲಿ ವಿಮಾನ ಏರುತ್ತಿದ್ದಾರೆ.
ರಾಜ್ಯ ಸಚಿವ ಸಂಪುಟ ರಚನೆ ವಿಚಾರ ಸಂಬಂಧ ಇಂದು ರಾತ್ರಿ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬಿಎಸ್ವೈ ದೆಹಲಿಗೆ ತೆರಳುತ್ತಿದ್ದಾರೆ. ತಮ್ಮ ಒಂದು ಜೇಬಿನಲ್ಲಿ ನೆರೆ ಪರಿಹಾರ ಸಂಬಂಧ ಬೇಡಿಕೆ ಇರುವ ಪಟ್ಟಿ, ಮತ್ತೊಂದು ಜೇಬಿನಲ್ಲಿ ಸಂಭಾವ್ಯ ಸಚಿವರ ಪಟ್ಟಿಯನ್ನು ಇರಿಸಿಕೊಂಡು ಹೋಗುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿ ಮಾಡಿ ರಾಜ್ಯದ ನೆರೆ ಹಾನಿ ಪರಿಹಾರ ಸಂಬಂಧ ಮನವಿ ಸಲ್ಲಿಸಲಿದ್ದಾರೆ. ಪ್ರಧಾನಿ ಭೇಟಿ ಬಳಿಕ ಕೇಂದ್ರ ರೈಲ್ವೆ ಸಚಿವರು, ವಿಮಾನಯಾನ ಖಾತೆ ರಾಜ್ಯ ಸಚಿವರನ್ನು ಭೇಟಿ ಮಾಡಿ ರಾಜ್ಯದ ರೈಲ್ವೆ ಯೋಜನೆ, ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ರಾಜ್ಯದ ಹಲವು ಯೋಜನೆಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ನಾಳೆ ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದು, ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ಮಹತ್ವದ ಸಚಿವ ಸಂಪುಟ ಪುನಾರಚನೆ ಸಂಬಂಧ ಚರ್ಚೆ ನಡೆಸಲಿದ್ದಾರೆ. ತಾವು ಕೊಂಡೊಯ್ದಿರುವ ಪಟ್ಟಿಯಲ್ಲಿನ ಹೆಸರು ಪ್ರಸ್ತಾಪಿಸಿ ಪಟ್ಟಿಗೆ ಗ್ರೀನ್ ಸಿಗ್ನಲ್ ಪಡೆದುಕೊಳ್ಳಲು ಪ್ರಯತ್ನ ನಡೆಸಲಿದ್ದಾರೆ. ಅಂತಿಮವಾಗಿ ಯಡಿಯೂರಪ್ಪ ಪಟ್ಟಿಗೆ ಗ್ರೀನ್ ಸಿಗ್ನಲ್ ಸಿಗುತ್ತಾ ಅಥವಾ ಹೆಸರುಗಳಲ್ಲಿ ಬದಲಾವಣೆ ಮಾಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಇನ್ನು ಸಿಎಂ ಬಿಎಸ್ವೈ ಆಪ್ತ ಮೂಲಗಳ ಪ್ರಕಾರ ಶನಿವಾರ ಸಚಿವ ಸಂಪುಟ ರಚನೆಗೆ ಅಮಿತ್ ಶಾ ಸಮ್ಮತಿ ನೀಡಲಿದ್ದು, ಸೋಮವಾರ ಸಚಿವ ಸಂಪುಟ ರಚನೆ ಸಾಧ್ಯತೆ ಇದೆ ಎನ್ನಲಾಗಿದೆ.