ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಲಿಂಗಾಯತ ಪಂಚಮಸಾಲಿ ಶಾಸಕರಿಗೇ ಸಿಎಂ ಸ್ಥಾನ ನೀಡಬೇಕು. ಅಗತ್ಯ ಬಿದ್ದರೆ ಪಕ್ಷದ ವರಿಷ್ಠರಿಗೆ ಒಬ್ಬರ ಹೆಸರನ್ನು ಸಲಹೆ ಮಾಡಲಾಗುವುದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ವತಿಯಿಂದ ಸಭೆ ನಡೆಸಿದರು. ಬಳಿಕ ಅವರು, ಸಭೆಯ ನಾಲ್ಕು ನಿರ್ಣಯಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿದರು. ಲಿಂಗಾಯತ ಪಂಚಮಸಾಲಿ ಸಮುದಾಯದ 17 ಶಾಸಕರಲ್ಲಿ ಮೂವರು ಸಿಎಂ ರೇಸ್ನಲ್ಲಿ ಇದ್ದಾರೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಪಂಚಮಸಾಲಿ ಶಾಸಕರಿಗೇ ಸಿಎಂ ಸ್ಥಾನ ನೀಡಬೇಕು. ಬಸವನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ್, ಮುರುಗೇಶ್ ನಿರಾಣಿ ಮೂವರು ಮುಂಚೂಣಿಯಲ್ಲಿದ್ದಾರೆ. ಅಗತ್ಯ ಬಿದ್ದರೆ ಪಕ್ಷದ ವರಿಷ್ಠರಿಗೆ ಒಬ್ಬರ ಹೆಸರನ್ನು ಸಲಹೆ ಮಾಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು. ಅಲ್ಲದೆ ಲಿಂಗಾಯತ ಪಂಚಮಸಾಲಿ ಮೀಸಲಾತಿಗೆ ಸ್ಪಂದಿಸಿದ್ದರೆ ಸಿಎಂಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಕಳಂಕಿತರಿಗೆ ಸಿಎಂ ಸ್ಥಾನ ನೀಡಬೇಡಿ
ಮಾಜಿ ಶಾಸಕ ವಿಜಯಾನಂದ ಕಾಶಪ್ಪ ಅವರು ಮಾತನಾಡಿ, ಸಿಡಿ ಕಳಂಕ ಮೊದಲಾದ ವಿವಾದ ಇರುವವರಿಗೆ ಸಿಎಂ ಸ್ಥಾನ ನೀಡಿ ಸಮಾಜದ ಹೆಸರು ಹಾಳು ಮಾಡುವ ಬದಲು, ಉತ್ತಮವಾದವರಿಗೇ ಸಿಎಂ ಖುರ್ಚಿ ನೀಡಬೇಕು ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ಸಿಎಂ ಆಗುವುದು ಸೂಕ್ತ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಸಚ್ಛಾರಿತ್ರರಿಗೆ ಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದರು.