ಬೆಂಗಳೂರು:75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಮೂರು ದಿನಗಳ ‘ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ'ವನ್ನು ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಿಎಂ, ಕೈಮಗ್ಗ ಅಂದ್ರೆ ಸ್ವಾವಲಂಬನೆ ಸಂಕೇತ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ. ಕೈಮಗ್ಗದ ಚರಕದ ಬಗ್ಗೆ ಮಹಾತ್ಮ ಗಾಂಧಿ ಅವರು ಮಹತ್ವ ತಿಳಿಸಿದ್ದು, ನಮ್ಮ ಬಟ್ಟೆಯನ್ನು ನಾವೇ ತಯಾರು ಮಾಡಬೇಕೆಂದು ಕರೆ ಕೊಟ್ಟವರು. ಕೇಂದ್ರ ಹಾಗೂ ರಾಜ್ಯ ಸರ್ಕಾರ 'ಆತ್ಮ ನಿರ್ಭರ್ ಭಾರತ್' ಎಂದು ಕರೆ ಕೊಟ್ಟಿದೆ. ಇದರಲ್ಲಿ ಕೈಮಗ್ಗ ಕೂಡ ಒಂದು. ನೇಕಾರರು, ಕೂಲಿಕಾರರು ಲಾಭಗಳಿಸುವ ಉದ್ದೇಶಕ್ಕೆ ಈ ಮೇಳ ಆಯೋಜಿಸಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾನಿಧಿಯನ್ನು ರಾಜ್ಯ ಸರ್ಕಾರ ನೀಡುತ್ತಿದ್ದು, ಅನೇಕ ಯೋಜನೆಗಳನ್ನು ಕೈಮಗ್ಗಕ್ಕೆ ಮೀಸಲಿಟ್ಟಿದ್ದೇವೆ ಎಂದರು.
ಇಂದಿನಿಂದ ಆಗಸ್ಟ್ 7ರವರೆಗೆ ನಡೆಯಲಿರುವ ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅನೇಕ ಸಹಕಾರ ಸಂಘ-ಸಂಸ್ಥೆಗಳು ಭಾಗವಹಿಸಿದ್ದು, ಮಳಿಗೆಗಳು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ತೆರೆದಿರಲಿವೆ. ಅಲ್ಲದೆ, ಆಗಸ್ಟ್ 7ರಂದು ಬೆಳಗ್ಗೆ 11.30ಕ್ಕೆ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಉದ್ಘಾಟಿಸಲಿದ್ದಾರೆ.