ಬೆಂಗಳೂರು:ಶಾಂತಿ ಕದಡಲು ಬಿಡಬೇಡಿ. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ರಾಜ್ಯದ ಜನತೆಗೆ ಕಳಕಳಿಯ ಮನವಿ ಮಾಡುತ್ತಿದ್ದು, ಗೂಂಡಾ ಚಟುವಟಿಕೆಯಲ್ಲಿ ತೊಡಗಿರುವವರ ಹೊರತು ಸಾಮಾನ್ಯ ಜನರ ಮೇಲೆ ಕಾನೂನು ಕೈಗೆ ತೆಗೆದುಕೊಂಡರೆ ಅಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಕಾನೂನು. ಈ ಕಾಯ್ದೆಯಿಂದ ಯಾರಿಗೂ ಆತಂಕ ಹಾಗೂ ತೊಂದರೆ ಇಲ್ಲ. ಪೌರತ್ವ ಕಾಯ್ದೆ ಜನರನ್ನು ರಾಷ್ಟ್ರೀಯತೆ ಆಧಾರದಲ್ಲಿ ಗುರುತಿಸುತ್ತದೆ. ಜಾತಿ, ಪಂಥ ಹಾಗೂ ಧರ್ಮದ ಆಧಾರದಲ್ಲಿ ಈ ಕಾಯ್ದೆ ಜನರನ್ನು ಗುರುತಿಸುವುದಿಲ್ಲ. ಅಲ್ಲದೆ ದೇಶದ ಎಲ್ಲ ರಾಜ್ಯಗಳೂ ಒಕ್ಕೂಟ ವ್ಯವಸ್ಥೆಯಲ್ಲಿವೆ. ಹಾಗಾಗಿ ಈ ಕಾಯ್ದೆ ಎಲ್ಲ ರಾಜ್ಯಗಳಿಗೂ ಅನ್ವಯವಾಗುತ್ತದೆ. ಯಾರೂ ಆತಂಕ ಪಡದೆ ಸಹಕರಿಸಬೇಕು ಎಂದು ಮನವಿ ಮಾಡಿದರು.