ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಸಿಎಂ ಬಿ. ಎಸ್. ಯಡಿಯೂರಪ್ಪ ಇದೀಗ ಹಂತಹಂತವಾಗಿ ತಮ್ಮ ದೈನಂದಿನ ಚಟುವಟಿಕೆಯನ್ನು ಆರಂಭಿಸುತ್ತಿದ್ದಾರೆ. ಇವತ್ತು ತಮ್ಮ ಅಧಿಕೃತ ನಿವಾಸದಲ್ಲಿ ಕರುಗಳ ಜೊತೆ ಅವರು ಕೆಲ ಸಮಯವನ್ನು ಕಳೆದರು.
ಯಡಿಯೂರಪ್ಪ ಅವರಿಗೆ ಹಸು, ಕರುಗಳೆಂದರೆ ಪ್ರೀತಿ. ಅದಕ್ಕಾಗಿಯೇ ತಮ್ಮ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಉಡುಗೊರೆಯಾಗಿ ನೀಡಿದ್ದ ಗಿರ್ ತಳಿಯ ಹಸುಗಳನ್ನು ಸ್ವೀಕರಿಸಿ ಸರ್ಕಾರಿ ನಿವಾಸ ಕಾವೇರಿಯ ಆವರಣದಲ್ಲಿಯೇ ಸಾಕುತ್ತಿದ್ದಾರೆ.
ಮುದ್ದು ಕರುಗಳಾದ ನಂದೀಶ ಮತ್ತು ಬಸವನ ಜೊತೆ ಕಾಲ ಕಳೆಯದೇ ಸಿಎಂಗೆ ದಿನ ಆರಂಭಗೊಳ್ಳುವುದೇ ಇಲ್ಲ. ಪ್ರತಿ ದಿನ ವಾಯುವಿಹಾರದ ವೇಳೆ ಕೆಲ ಸಮಯ ಈ ಪುಟ್ಟ ಕರುಗಳ ಮೈತಡವುದು ಬಿಎಸ್‌ವೈ ಹವ್ಯಾಸ.
ಕೊರೊನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಯಡಿಯೂರಪ್ಪನವರು ವಾಪಸ್ಸಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಕಾರಣ ಆಗಸ್ಟ್ 2 ರಿಂದ ಇಂದಿನವರೆಗೆ ಕರುಗಳ ಜೊತೆ ಕಾಲ ಕಳೆಯಲು ಸಾಧ್ಯವಾಗಿರಲಿಲ್ಲ. ಇಂದು ಭಾನುವಾರ ರಿಲ್ಯಾಕ್ಸ್ ಮೂಡ್ನಲ್ಲಿದ್ದ ಅವರು ಕರುಗಳ ಜೊತೆ ಕೆಲ ಸಮಯ ಕಳೆದರು. ಆ ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
'ನನ್ನ ದಿನಚರಿ ಪ್ರಾರಂಭವಾಗುವುದೇ ಬೆಳಗ್ಗಿನ ನಡಿಗೆ ಮೂಲಕ. ಆ ಸಮಯದಲ್ಲಿ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವನ ಮೈದಡವದೆ ಅದು ಪೂರ್ಣವಾಗದು. ಮೂಕ ಪ್ರಾಣಿಗಳ ಪ್ರೀತಿ, ಅಕ್ಕರೆಗಳ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ' ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.