ಬೆಂಗಳೂರು :ಅಕ್ರಮ ಚಟುವಟಿಕೆ ನಡೆಸುತ್ತಿದ್ದ ನಗರದ ಮೂರು ಸ್ಪಾಗಳ (ಮಸಾಜ್ ಪಾರ್ಲರ್) ಮೇಲೆ ದಾಳಿ ನಡೆಸಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ, ಉತ್ತರ ಭಾರತ ಮೂಲದ ದೇವೆಂದರ್, ಅಭಿಜಿತ್ ಎನ್ನುವವರನ್ನು ಬಂಧಿಸಿದ್ದಾರೆ. ವಿದೇಶಿಯರು ಸೇರಿ 13 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.
ಮಹಿಳೆಯರಿಗೆ ಕೆಲಸದ ಆಮಿಷ ತೋರಿಸಿ ಸ್ಪಾಗಳಲ್ಲಿ ಅವರನ್ನು ಅಕ್ರಮ ಚಟುವಟಿಕೆಗಳಿಗೆ ದೂಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಅಧರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಫೆಬ್ರವರಿ 3 ಹಾಗೂ 4ರಂದು ರಾಯಲ್ ಸ್ಪಾ ಅಂಡ್ ಸಲೂನ್, ಅಸ್ತೇಟಿಕ್ ಯೂನಿಸೆಕ್ಸ್ ಸಲೂನ್ ಅಂಡ್ ಸ್ಪಾ, ನಿಸರ್ಗ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.