ಬೆಂಗಳೂರು: ಒಂಟಿಯಾಗಿ ಓಡಾಡುವ ಜನರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಲು ಸಿದ್ದತೆ ನಡೆಸಿದ್ದ ಯಲಹಂಕ ಪೊಲೀಸ್ ಠಾಣೆಯ ರೌಡಿಶೀಟರ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಮತ್ತು ಡಿ.ಜೆ.ಹಳ್ಳಿ ಠಾಣೆಗಳ ರೌಡಿಶೀಟರ್‌ಗಳಾದ ವಾಸೀಂ, ನಜೀಮ್ ಹಾಗೂ ಮೋಹಿಸಿನ್ ಬಂಧಿತರು. ಈ ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳು ಬುಧವಾರ ಸಂಜೆ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರದಿಂದ ಕನಕನಗರದ ಕಡೆ ಹೋಗುವ ರಸ್ತೆಯ ರೈಲ್ವೆ ಹಳಿಯ ಬಳಿ ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಈ ಮಾರ್ಗದಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ದರೋಡೆಗೆ ಸಿದ್ದತೆ ನಡೆಸಿದ್ದರು. ಈ ಕುರಿತು ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರ ವಿರುದ್ದ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ದೇಶದಲ್ಲಿ 13 ಸಾವಿರ ಕೋವಿಡ್ ಸೋಂಕಿತರು ಪತ್ತೆ: ಚೇತರಿಕೆ ಪ್ರಮಾಣ ಶೇ 98.49
ಕೊಲೆ-ಕೊಲೆ ಯತ್ನ: ರೌಡಿಶೀಟರ್ ವಾಸೀಂ ವಿರುದ್ಧ 2014ರಲ್ಲಿ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ ಮತ್ತು ಇನ್ನೊಬ್ಬ ರೌಡಿಶೀಟರ್ ನಜೀಮ್ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.