ಬೆಂಗಳೂರು: ಶಾಸಕರ ನಿವಾಸ, ಪೊಲೀಸ್ ಠಾಣೆಯ ಮೇಲೆ ದಾಳಿ, ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದ ಆರೋಪಿಗಳ ಬಂಧನಕ್ಕಾಗಿ ಸಿಸಿಬಿ ಪೊಲೀಸರು ತೆರಳಿದ್ದ ವೇಳೆ ನಾಟಕೀಯ ಬೆಳವಣಿಗೆ ನಡೆದಿದೆ.
ನಿನ್ನೆ ರಾತ್ರಿ ಡಿ.ಜೆ. ಹಳ್ಳಿ ವ್ಯಾಪ್ತಿಯ ಮನೆಗಳಲ್ಲಿ ಅಡಗಿ ಕೂತಿದ್ದ ಆರೋಪಿಗಳನ್ನು, ಸಿನಿಮೀಯ ಶೈಲಿಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ 60ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನಕ್ಕೂ ಮುನ್ನ ಪೊಲೀಸರೊಂದಿಗೆ ಹೈಡ್ರಾಮ ಸೃಷ್ಟಿಸಿದ್ದ ಕಿಡಿಗೇಡಿಗಳ ಪ್ಲಾನ್ ವಿಫಲಗೊಳಿಸಿ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಇದುವರೆಗೂ 206 ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರು ಬಂದರೆ ಹೆಂಗಸರನ್ನು ಮುಂದೆ ಬಿಡಿ
ಬಂಧಿತ ಆರೋಪಿಗಳು ಸೇರಿದಂತೆ ವಿವಿಧ ಮೂಲಗಳು, ಮನೆಯಲ್ಲಿ ಅಡಗಿಕೊಂಡಿದ್ದ ಕಿಡಿಗೇಡಿಗಳಿಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಪೊಲೀಸರು ಮನೆ ಹತ್ತಿರ ಹುಡುಕಿಕೊಂಡು ಬಂದರೆ ಹೆಂಗಸರನ್ನು ಮುಂದೆ ಬಿಡಿ, ನೀವೂ ಅಡಗಿಕೊಳ್ಳಿ ಎಂದು ಸಂದೇಶ ರವಾನಿಸಿ ಎಚ್ಚರಿಸಿದ್ದರು.
ಆರೋಪಿಗಳ ಚಹರೆ, ಮನೆ ವಿಳಾಸ, ಮೊಬೈಲ್ ನಂಬರ್ ಸೇರಿದಂತೆ ಸೂಕ್ತ ಮಾಹಿತಿಯೊಂದಿಗೆ ಮನೆ ಜಾಡು ಹಿಡಿದು ಬಂದ ಪೊಲೀಸರಿಗೆ, ಮನೆ ಹೆಂಗಸರು ಹೇಳಿದ ಉತ್ತರ ಆಶ್ಚರ್ಯ ಮೂಡಿಸಿತ್ತು. ಅಲ್ಲದೆ ಒಂದೇ ಉತ್ತರ ಎಲ್ಲಾ ಹೆಂಗಸರ ಬಾಯಿಂದ ಬಂದಾಗ, ಅನುಮಾನಗೊಂಡ ಪೊಲೀಸರು ಆರೋಪಿಗಳ ನೆಟ್ ವರ್ಕ್ ಪರಿಶೀಲಿಸಿದಾಗ ಆರೋಪಿಗಳು ಮನೆ ಹತ್ತಿರವೇ ಇರುವುದಾಗಿ ತಿಳಿದಿದೆ. ನಂತರ ಮನೆಯೊಳಗೆ ಹೋಗಿ ಪರಿಶೀಲಿಸಿದಾಗ ಮನೆಯಲ್ಲಿ ಅಡಗಿಕೊಂಡಿದ್ದಾರೆ.
ಅಲ್ಲದೆ ಕೆಲವರು ಬಂಧನ ಭೀತಿಯಿಂದ ಓಡಿ ಹೋಗುವಾಗ ಆರೋಪಿಗಳ ಬೆನ್ನಟ್ಟಿದ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳೆಲ್ಲರ ಮೊಬೈಲ್ನಲ್ಲಿ ಗಲಭೆಗೆ ಸಂಬಂಧಿಸಿದ ವಿಡಿಯೋ ದೊರೆತಿದೆ.
ನಾಪತ್ತೆಯಾದ ಗಲಭೆಕೋರರು ಮುರಗಮಲ್ಲ ದರ್ಗಾ ಕಡೆಗೆ
ಗಲಭೆ ಬಳಿಕ ಪೊಲೀಸ್ ಭೀತಿಯಿಂದ ಚಿಂತಾಮಣಿ, ಮುರಗಮಲ್ಲ ಕಡೆ ಹೋಗಿ ತಲೆಮರೆಸಿಕೊಂಡಿದ್ದಾರೆ. ಮುಸಲ್ಮಾನರ ಪವಿತ್ರ ಕ್ಷೇತ್ರವಾದ ಮುರಗಮಲ್ಲ ದರ್ಗಾಕ್ಕೆ ಧರ್ಮ, ಜಾತಿ ನೋಡದೆ ಎಲ್ಲರೂ ಬರುತ್ತಾರೆ. ಮುಸಲ್ಮಾನರ ಪಾಲಿಗೆ ಶ್ರದ್ಧಾ ಕೇಂದ್ರವಾದ ಈ ಸ್ಥಳಕ್ಕೆ ಆರೋಪಿಗಳು ಹೋಗಿ ಮಾಡಿರುವ ತಪ್ಪನ್ನು ಮನ್ನಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರಂತೆ.
ಸದ್ಯ ಮುರಗಮಲ್ಲದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಳುಹಿಸಲಾಗಿದೆ. ಅಲ್ಲದೆ ಆರೋಪಿಗಳು ಅಲ್ಲಿಯೇ ಇರುವುದು ಖಚಿತವಾಗಿದೆ. ಗಲಭೆ ನಡೆಸಿದವರ ಪೈಕಿ ಇನ್ನೂ 200 ಮಂದಿ ಆರೋಪಿಗಳು ನಾಪತ್ತೆಯಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲರನ್ನೂ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.